ಸಿದ್ದಾಪುರ : ಮಕ್ಕಳಿಗೆ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ನೀಡಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ : ಬಿ.ಕೆ.ದೇವಿಕಾ

ಸಿದ್ದಾಪುರ : ಮಕ್ಕಳಿಗೆ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ನೀಡಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ.ಪ್ರತಿಯೊಬ್ಬರ ನಡತೆ, ವ್ಯಕ್ತಿತ್ವ ಪರಿಶುದ್ಧವಾಗಿದ್ದರೆ ಮಾತ್ರ ಪರಿವರ್ತನೆ ಸಾಧ್ಯ ಎಂದು ಸಿದ್ದಾಪುರದ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ.ದೇವಿಕಾ ಹೇಳಿದರು.
ಅವರು ತಾಲೂಕಿನ ಹಾರ್ಸಿಕಟ್ಟಾ ಗಣೇಶಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾರ್ಸಿಕಟ್ಟಾ, ಮುಠ್ಠಳ್ಳಿ ಹಾಗೂ ಬಿದ್ರಕಾನ ಮಹಿಳಾ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವದಲ್ಲಿ ಸಂಪನ್ಮೂಲವ್ಯಕ್ತಿಗಳಾಗಿ ಸಂಸ್ಕೃತಿ ಹಾಗೂ ಸಂಸ್ಕಾರದ ಅವಶ್ಯಕತೆ ಕುರಿತು ಮಾತನಾಡಿದರು.
ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಮನೆಯಲ್ಲಿಯೇ ನೀಡಬೇಕು. ಇದು ಎಲ್ಲಿಯೂ ಸಿಗುವುದಲ್ಲ. ಮನೆಯಲ್ಲಿ ಮಕ್ಕಳಿಗೆ ರಾಮಾಯಣ, ಮಹಾಭಾರತ, ಭಗವದ್ಗೀತೆಗಳನ್ನು ತಿಳಿಸಿಕೊಡಬೇಕು ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆಯ ತಾಲೂಕು ನಿರ್ದೇಶಕ ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ಉದ್ಘಾಟಿಸಿ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸ್ಫರ್ಧಾಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಿಸಿದರು.
ಹಾರ್ಸಿಕಟ್ಟಾ ಗ್ರಾಪಂ ಅಧ್ಯಕ್ಷೆ ವಿದ್ಯಾ ಪಿ.ನಾಯ್ಕ ಅಧ್ಯಕ್ಷತೆವಹಿಸಿದ್ದರು.
ಮುಠ್ಠಳ್ಳಿ ಒಕ್ಕೂಟದ ಅಧ್ಯಕ್ಷ ತಿಮ್ಮಪ್ಪ ಮತ್ತಿತರರು ಉಪಸ್ಥಿತರಿದ್ದರು