ಮೊಸಳೆಯನ್ನೇ ಮದ್ವೆಯಾದ ಮೇಯರ್, ಇದೆಂಥಾ ವಿಚಿತ್ರ ಸಂಪ್ರದಾಯ!

ಮೆಕ್ಸಿಕೋದಲ್ಲಿ ಶತಮಾನಗಳಷ್ಟು ಹಳೆಯ ಆಚರಣೆಯ ಪ್ರಕಾರ ಅಲ್ಲಿನ ನಗರದ ಮೇಯರ್ ಮೊಸಳೆಯನ್ನು ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ. ಹೀಗೆ ಮದುವೆಯಾಗುವುದರ ಹಿಂದೆ ನಿರ್ಧಿಷ್ಟ ಉದ್ದೇಶವೂ ಇದೆ. ಭಾರತದ ಕೆಲ ಭಾಗಗಳಲ್ಲಿ ಕಾಲಕ್ಕೆ ತಕ್ಕಂತೆ ಮಳೆಯಾಗದಿದ್ದರೆ ಕಪ್ಪೆಗಳಿಗೆ, ಕತ್ತೆಗಳಿಗೆ ಮದುವೆ ಮಾಡಿಸುತ್ತಾರೆ. ನಂಬಿಕೆಯೋ, ಮೂಢನಂಬಿಕೆಯೋ ಜನರಂತೂ ಇಂಥಾ ವಿಚಾರಗಳನ್ನು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಾರೆ. ಹಾಗೆಯೇ ಮೆಕ್ಸಿಕೋದಲ್ಲಿ ನಿರ್ಧಿಷ್ಟ ಕಾರಣವಿಟ್ಟುಕೊಂಡು ಮೇಯರ್‌ಗೆ ಮೊಸಳೆ ಜೊತೆ ಮದುವೆ ಮಾಡಲಾಗಿದೆ. 

ಮೇಯರ್‌-ಮೊಸಳೆ ವಿವಾಹಕ್ಕೆ ಮಹತ್ವದ ಉದ್ದೇಶವಿದೆ. ಅಲ್ಲಿನ ಸಂಪ್ರದಾಯದ ಪ್ರಕಾರ, ನದಿಯಲ್ಲಿ ಮೀನು ಹಿಡಿಯಲು ಅನುಕೂಲವಾಗುವಂತೆ ಸಾಕಷ್ಟು ಮಳೆಯಾಗಿ, ಬೆಳೆ ಬೆಳೆದರೆ ಜನ ಜೀವನ ಸಮೃದ್ಧವಾಗಿರುತ್ತದೆ. ಕಾಲಕ್ಕೆ ಸರಿಯಾಗಿ ಮಳೆಯಾಗದಿದ್ದಾಗ ಇಲ್ಲಿನ ಮೇಯರ್ ಮೊಸಳೆಯನ್ನು ಮದುವೆಯಾಗಬೇಕಾಗುತ್ತದೆ. ಹಿಸ್ಪಾನಿಕ್ ಯುಗಕ್ಕೂ ಮೊದಲಿನ ಅವಧಿಯ ಚೊಂಟಾಲ್ ಮತ್ತು ಹುವೆ ಬುಡಕಟ್ಟು ಸಮುದಾಯದಲ್ಲಿ ಪ್ರಕೃತಿಯನ್ನು ಪೂಜಿಸಲು ಈ ಆಚರಣೆ ಚಾಲ್ತಿಯಲ್ಲಿತ್ತು ಎಂದು ತಿಳಿದುಬಂದಿದೆ. ವಿವಾಹ ಕಾರ್ಯಕ್ರಮದಲ್ಲಿ ಸ್ಯಾನ್‌ಪೆಡ್ರೊ ಹ್ವಾಮೆಲುಲಾ ನಗರದ ಮೇಯರ್ ವಿಕ್ಟರ್ ಹ್ಯೂಗೊ ಸೊಸಾ ಪುಟ್ಟ ಮೊಸಳೆಯ ಮೂತಿಗೆ ಮುತ್ತಿಡುವ ಮೂಲಕ ಸಾಂಕೇತಿಕವಾಗಿ ವಿವಾಹವಾದರು.

ಮೊಸಳೆ ಕಚ್ಚದಂತೆ ಅದರ ಬಾಯಿಯನ್ನು ಗಟ್ಟಿಯಾಗಿ ಕಟ್ಟಲಾಗಿತ್ತು. ಪುಟ್ಟ ರಾಜಕುಮಾರಿ ಎಂದು ಕರೆಯಲ್ಪಡುವ ಮೊಸಳೆ ಭೂಮಿತಾಯಿಯನ್ನು ಪ್ರತಿನಿಧಿಸುವ ದೇವತೆ ಎಂದು ನಂಬಲಾಗಿದ್ದು ಸ್ಥಳೀಯ ನಾಯಕನೊಂದಿಗೆ ಆಕೆಯ ವಿವಾಹವು ಮಾನವ-ದೈವಿಕ ಬಾಂಧವ್ಯದ ಸಂಕೇತ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.

ಮೇಯರ್ ಮತ್ತು ಮೊಸಳೆಯ ಮದುವೆ ಅದ್ಧೂರಿಯಾಗಿ ನೆರವೇರಿದೆ. ವಾದ್ಯ ಓಲಗಗಳೊಂದಿಗೆ ಜನರು ವಧುವಾದ ಮೊಸಳೆಯನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬಂದರು. ಬಳಿಕ ಸಂಪ್ರದಾಯಬದ್ಧವಾಗಿ ಮೆಕ್ಸಿಕೋ ಮೇಯರ್ ಜೊತೆ ಮದುವೆ ಮಾಡಲಾಯಿತು. ಬಳಿಕ ಜನರು ಮೆರವಣಿಗೆ ನಡೆಸಿ ಸಂಭ್ರಮಿಸಿದರು. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಮೂಲದ ಬಗ್ಗೆ ನಮಗೆ ಹೆಮ್ಮೆಯಿದೆ ಮತ್ತು ಈ ಆಚರಣೆಯಿಂದ ತುಂಬಾ ಸಂತೋಷವಾಗಿದೆ ಎಂದು ವಿವಾಹವನ್ನು ಆಯೋಜಿಸಿದ್ದ , ದೇವಮಾತೆ ಎಂದು ಕರೆಸಿಕೊಳ್ಳುವ ಎಲಿಯಾ ಎಡಿತ್ ಆಗ್ವಿಲರ್ ಹೇಳಿದ್ದಾರೆ.