ಸೂರತ್: ಇಂದು ವಿಶ್ವ ಅಪ್ಪಂದಿರ ದಿನ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಪ್ರೀತಿಯ ಅಪ್ಪನಿಗೆ ಶುಭಾಶಯ ವಿನಿಮಯ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಸಾಪ್ ಸ್ಟೇಟಸ್‌ಗಳಲ್ಲಿ , ಇನ್ಸ್ಟಾಗ್ರಾಮ್, ಟ್ವಿಟ್ಟರ್, ಫೇಸ್‌ಬುಕ್ ಹೀಗೆ ಎಲ್ಲೆಡೆ ಬಹುತೇಕರು ಅಪ್ಪನ ಜೊತೆ ತಾವು ಕಳೆದ ಕ್ಷಣಗಳ ಫೋಟೋ ಜೊತೆ ಕೆಲವು ಭಾವುಕ ಬರಹಗಳನ್ನು ಬರೆದು ಅಪ್ಪನಿಗೆ ಶುಭ ಹಾರೈಸುತ್ತಿದ್ದಾರೆ. ಅಪ್ಪನನ್ನು ಕಳೆದುಕೊಂಡವರು ಅಪ್ಪ ನೀ ಇರಬೇಕಿತ್ತು ಎಂದು ಹಂಬಲಿಸಿದರೆ, ಇರುವವರು ಅಪ್ಪ ನಿನ್ನ ಆಯಸ್ಸು ಡಬ್ಬಲ್ ಆಗ್ಲಿ ಅಂತ ಪ್ರಾರ್ಥನೆ ಮಾಡ್ತಿದ್ದಾರೆ. ಅಪ್ಪ ಮಕ್ಕಳ ಈ ಒಡನಾಟ ತುಂಬಾ ಭಾವುಕವಾದುದು. ಆದರೆ ಅಮ್ಮನಿಲ್ಲದೆ ಅಪ್ಪನಾದ ವ್ಯಕ್ತಿ ಬಗ್ಗೆ ನಿಮಗೆ ಗೊತ್ತಾ?
ಪುರುಷರೇ ಆಗಲಿ ಮಹಿಳೆಯರೇ ಆಗಲಿ ಮದುವೆಯಾಗಿ (ವಿದೇಶಗಳಲ್ಲಿ ಮದುವೆಯಾಗದೇಯೋ ಪೋಷಕರಾಗುತ್ತಾರೆ) ಮಗುವನ್ನು ಹಡೆದ ನಂತರವೇ ಅಪ್ಪ ಅಮ್ಮ ಅನಿಸಿಕೊಳ್ಳುತ್ತಾರೆ. ಆದರೆ ಗುಜರಾತ್‌ನ (Gujarat) ಈ ವ್ಯಕ್ತಿಯೊಬ್ಬರು ಮದುವೆಯಾಗದೇ ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳನ್ನು ಪಡೆದು ಅಪ್ಪನಾಗಿದ್ದು, ಮಕ್ಕಳ ಪಾಲನೆಯಲ್ಲಿ ದಿನ ಕಳೆಯುತ್ತಿದ್ದಾರೆ. ಸರೋಗಸಿ ಮೂಲಕ ಕೇವಲ ಸಿನಿಮಾ ನಟಿಯರು ಮಕ್ಕಳನ್ನು ಹೆರುವ ಸಾಮರ್ಥ್ಯವಿಲ್ಲದ ಹೆಣ್ಮಕ್ಕಳು ಮಗು ಪಡೆಯುತ್ತಾರೆ ಎಂಬುದು ಸಾಮಾನ್ಯ ಜನರ ತಿಳುವಳಿಕೆ. ಆದರೆ ಇಲ್ಲೊಬ್ಬರು ವ್ಯಕ್ತಿ ಮದುವೆಯಾಗಲು ಹೆಣ್ಣಿಗಾಗಿ ಅಲೆದಾಡಿ ಅಲೆದಾಡಿ ಸೋತು ನಂತರ ಬಾಡಿಗೆ ತಾಯಿ ಮೂಲಕ ಮಗು ಪಡೆದು ಅಪ್ಪನಾದ ಕತೆ ಇದು.
ಹೌದು ಇದು ಗುಜರಾತ್‌ನ ಸೂರತ್ ನಿವಾಸಿಯಾಗಿರುವ 37 ವರ್ಷದ ಪ್ರಿತೇಷ್ ದೇವ್ ಅವರ ಕತೆವ್ಯಥೆ, ಕಳೆದ ವರ್ಷ ಅವರು ಬಾಡಿಗೆ ತಾಯಿ ಮೂಲಕ ಒಂದು ಗಂಡು ಒಂದು ಹೆಣ್ಣು ಅವಳಿ ಮಕ್ಕಳಿಗೆ ತಂದೆಯಾದರು. ಇದಕ್ಕೂ ಮೊದಲು ಅವರು ಮದುವೆಯಾಗಲು ಹೆಣ್ಣಿಗಾಗಿ ಹುಡುಕಾಟ ನಡೆಸಿದ್ದು, ಅಷ್ಟಿಷ್ಟಲ್ಲ, ಅಲೆದು ಅಲೆದು ಚಪ್ಪಲಿ ಸವೆಯಿತೇ ಹೊರತು ಇವರಿಗೊಂದು ಹೆಣ್ಣು ಒಲಿದು ಬರಲಿಲ್ಲ, ಸರಕಾರಿ ಕೆಲಸವಿಲ್ಲದ ಕಾರಣ ನನಗೆ ಹೆಣ್ಣು ಸಿಗಲಿಲ್ಲ ಎಂಬುದು ಇವರ ಅಳಲು.
ಬಂಜೆತನ ತಜ್ಞ ವೈದ್ಯ ಡಾಕ್ಟರ್ ಪಾರ್ಥ ಭವಿಷ್ ಅವರ ಪ್ರಕಾರ, ಪ್ರಿತೇಷ್ ದೇವ್ (pritesh dev) ಅವರು ಹೀಗೆ ಬಾಡಿಗೆ ತಾಯಿ ಮೂಲಕ ಮಗು ಪಡೆದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಒಬ್ಬರು. ಇವರು ಬಾಡಿಗೆ ತಾಯ್ತನದ ಬಗ್ಗೆ ಹೊಸ ಕಾನೂನು ಜಾರಿಗೆ ಬರುವ ಮೊದಲು ಈ ಮೂಲಕ ಮಗು ಪಡೆದ ಕೊನೆಯ ಅವಿವಾಹಿತ ವ್ಯಕ್ತಿ. ಹೊಸ ನಿಯಮಗಳ ಪ್ರಕಾರ, ಬ್ಯಾಚುಲರ್ ಮಹಿಳೆ, ಪುರುಷ ಸಲಿಂಗಿ ಜೋಡಿಗಳಿಗೆ ಮಗು ಬಾಡಿಗೆ ತಾಯ್ತನದ ಮೂಲಕ ಪಡೆಯುವ ಅವಕಾಶವಿಲ್ಲ. ಈ ಬಗ್ಗೆ ಮಾತನಾಡಿರುವ ಪ್ರಿತೇಷ್ ದೇವ್, ನಾನು ಈ ವಿಷಯದಲ್ಲಿ ಲಕ್ಕಿ, ಅವಿವಾಹಿತರಾಗಿಯೇ ಉಳಿದಿರುವ ನನ್ನಂತಹ ಸಾವಿರಾರು ಜನರಿಗೆ ಈಗ ಬಾಡಿಗೆ ತಾಯ್ತನದ ಮೂಲಕವೂ ಮಗು ಪಡೆಯುವ ಅವಕಾಶವಿಲ್ಲ ಎಂದಿದ್ದಾರೆ.
ಸ್ವ ಉದ್ಯೋಗಿಯಾಗಿರುವ ಅವರು ಭಾವನಗರದಲ್ಲಿ ಬ್ಯಾಂಕ್‌ಗಳಿಗೆ ಗ್ರಾಹಕ ಸೇವಾ ಕೇಂದ್ರದ ಕೆಲಸ ಮಾಡುತ್ತಿದ್ದು, ಇವರು ಪೋಷಕರು ಸೂರತ್‌ನಲ್ಲಿ ನೆಲೆಸಿದ್ದಾರೆ. ಇವರ ಸಮುದಾಯದಲ್ಲಿ ಹೆಣ್ಣು ಮಕ್ಕಳನ್ನು ಸರ್ಕಾರಿ ಉದ್ಯೋಗ ಇರುವವರಿಗೆ ಮಾತ್ರ ಕೊಡುವ ಕಾರಣಕ್ಕೆ ಅನೇಕ ಯುವಕರು ಅವಿವಾಹಿತರಾಗಿ ಉಳಿದಿದ್ದಾರೆ. ನಮಗೆ ಭೂಮಿ ಹಾಗೂ ಆಸ್ತಿ ಇದೆ. ಆದರೆ ಅದ್ಯಾವುದು ಲೆಕ್ಕಕ್ಕೆ ಬರುವುದಿಲ್ಲ ಎನ್ನುತ್ತಾರೆ ಪ್ರಿತೇಷ್ ದೇವ್,
ಆದರೆ ಬಾಡಿಗೆ ತಾಯ್ತನದಿಂದ ಮಕ್ಕಳನ್ನು ಪಡೆದ ನಂತರ ನನ್ನ ಬದುಕು ಬಹಳ ಬದಲಾಗಿದೆ. ಧೈರ್ಯ ಹಾಗೂ ದಿವ್ಯ ಅವರ ಆಗಮನದಿಂದ ನನ್ನ ಪೋಷಕರು ಕೂಡ ಖುಷಿಯಾಗಿದ್ದಾರೆ. ಮಗ ಮದುವೆಯಾಗಿಲ್ಲ ಎಂಬ ಕೊರಗು ಅವರಿಗೂ ಇತ್ತು. ಆದರೆ ಮನೆಗೆ ಮಕ್ಕಳು ಬಂದ ನಂತರ ಅವರ ಮನಸ್ಥಿತಿ ಬದಲಾಗಿದೆ. ಅವಳಿಗಳ ಬದುಕಿನಿಂದ ನಮ್ಮ ಮನೆ ಮನ ತುಂಬಿದೆ. ಈ ಮಕ್ಕಳನ್ನು ಬೆಳೆಸುವಲ್ಲಿ ನಮ್ಮ ತಾಯಿ ಬಹಳಷ್ಟು ಶ್ರಮಿಸಿದ್ದಾರೆ. ಅವರೇ ನಮ್ಮ ಕುಟುಂಬದ ಆಧಾರ ಸ್ತಂಭ ಎಂದು ಪ್ರಿತೇಷ್ ಹೇಳುತ್ತಾರೆ. ಒಟ್ಟಿನಲ್ಲಿ ಮದುವೆಯಾಗದಿದ್ದರೇನಂತೆ ಮಕ್ಕಳು ಬೇಕೆನ್ನುವ ಹಂಬಲ ಪ್ರತಿಯೊಬ್ಬರದ್ದು, ಅದರಲ್ಲಿ ಸ್ತ್ರೀ ಪುರುಷ ಎಂಬ ಭೇದವಿಲ್ಲ, ಪತಿ ತೀರಿಹೋದ ನಂತರ ತೊರೆದು ಹೋದ ನಂತರ ಅನೇಕ ಸ್ತ್ರೀಯರು ಮಕ್ಕಳಿಗೆ ಅಪ್ಪ ಅಮ್ಮ ಇಬ್ಬರು ಆಗಿ ಮಕ್ಕಳ ಲಾಲನೆ ಪಾಲನೆ ಪೋಷಣೆಯಲ್ಲಿ ಯಶಸ್ವಿಯಾಗಿರುವ ಅನೇಕ ಸ್ತ್ರೀಯರನ್ನು ನಾವು ನೋಡಿದ್ದೇವೆ. ಆದರೆ ಇಲ್ಲಿ ಏಕಾಂಗಿ ಪೋಷಕನಾಗಿ ಮಕ್ಕಳ ಪಾಲಿಗೆ ಅಪ್ಪ ಅಮ್ಮ ಒಬ್ಬನೇ ಆಗಿ ಪ್ರಿತೇಶ್ ಪಟೇಲ್ ಅವಳಿ ಮಕ್ಕಳನ್ನು ಸಲಹುತ್ತಿರುವುದು ಹೆಮ್ಮೆಯ ವಿಚಾರವೇ . ಇಂತಹವರ ಕಾರಣದಿಂದಲೂ ಅಪ್ಪಂದಿರ ದಿನ ಸಾರ್ಥಕ್ಯ ಪಡೆಯುತ್ತವೆ. ಪ್ರಿತೇಶ್ ಅವರಿಗೆ ಅಪ್ಪಂದಿರ ದಿನದ ಶುಭಾಶಯಗಳು.