ಪ್ಯಾರಿಸ್: 17 ವರ್ಷದ ಹುಡುಗನನ್ನು ಗುಂಡಿಟ್ಟು ಹತ್ಯೆ ಮಾಡಿದ ನಂತರ ಫ್ರಾನ್ಸ್‌ನಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಟ್ರಾಫಿಕ್ ತಪಾಸಣೆ ವೇಳೆ ಹುಡುಗನ ಮೇಲೆ ಪೊಲೀಸರು ಗುಂಡು ಹಾರಿಸಿ ಹತ್ಯೆಗೈದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಮಂಗಳವಾರ ರಾತ್ರಿಯಿಂದಲೇ ಪ್ರತಿಭಟನೆ ಭುಗಿಲೆದ್ದಿದೆ.
ಫ್ರಾನ್ಸ್‌ನ ಪ್ರತಿಭಟನೆ ಶನಿವಾರ 4ನೇ ದಿನಕ್ಕೆ ಕಾಲಿಟ್ಟಿದ್ದು, ಬೀದಿ ಬೀದಿಗಳಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು ಹಾಕಿ, ಸಿಕ್ಕ ಸಿಕ್ಕ ವಾಹನಗಳಿಗೆ ಹಾಗೂ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಭಟನಾಕಾರರ ಆಕ್ರೋಶಕ್ಕೆ 2,000ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿಯಾಗಿವೆ. 500 ಕಟ್ಟಡಗಳು ಧ್ವಂಸಗೊಂಡಿವೆ. ಹಾಗಾಗಿ ಪ್ರತಿಭಟನೆಯನ್ನು ಹತ್ತಿಕ್ಕಲು ಸುಮಾರು 45 ಸಾವಿರ ಪೊಲೀಸರನ್ನ ಭದ್ರತೆಗೆ ನಿಯೋಜಿಸಲಾಗಿದೆ. ಈವರೆಗೆ ಸುಮಾರು 994 ಮಂದಿಯನ್ನು ಬಂಧಿಸಲಾಗಿದೆ. ಪ್ಯಾರಿಸ್ ಸಹಿತ ಹಲವು ನಗರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದರೂ ಗಲಭೆಗಳು ನಿಯಂತ್ರಣಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರ 17ರ ಹುಡುಗರನ್ನು ಹತ್ಯೆ ಮಾಡಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನೂ ಬಂಧಿಸಲಾಗಿದ್ದು, ಅವರ ವಿರುದ್ಧ ತನಿಖೆಗೆ ಸರ್ಕಾರ ಆದೇಶಿಸಿದೆ.
ಫ್ರಾನ್ಸ್‌ನ ಪಶ್ಚಿಮ ಪ್ಯಾರಿಸ್‌ನ ನಾಂಟೇರ್‌ನಲ್ಲಿ ಟ್ರಾಫಿಕ್ ತಪಾಸಣೆ ವೇಳೆ ಪೊಲೀಸರು 17 ವರ್ಷದ ನಹೆಲ್ ಎಂಬ ಹುಡುಗನನ್ನ ಗುಂಡಿಟ್ಟು ಹತ್ಯೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿರುವುದರಿಂದ ಶೀಘ್ರವೇ ಶಮನಗೊಳಿಸಲು ಹಲವು ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಅಲ್ಲದೇ ಪರಿಸ್ಥಿತಿ ಇನ್ನಷ್ಟು ಭುಗಿಲೇಳುವ ಸಾಧ್ಯತೆಗಳಿರುವುದರಿಂದ ಸರ್ಕಾರ 45 ಸಾವಿರ ಪೊಲೀಸರನ್ನ ನಿಯೋಜನೆ ಮಾಡಿದೆ. ಮತ್ತೆ ರಾಷ್ಟ್ರದಲ್ಲಿ ಶಾಂತಿ ನೆಲೆಸಲು ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರನ್ ಹರಸಾಹಸ ನಡೆಸುತ್ತಿದ್ದಾರೆ. ಈ ನಡುವೆ ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿ ಘೋಷಣೆ ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.
ಅಲ್ಜೇರಿಯನ್ ಮೂಲದ 17 ವರ್ಷದ ಹುಡುಗ ನಹೆಲ್ ಎಂಬಾತ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಪೊಲೀಸರು ಹತ್ಯೆ ಮಾಡಿದ್ದಾರೆ. ಮಂಗಳವಾರ ಬೆಳಿಗ್ಗೆ ಆತ ಕಾರ್ ಚಲಾಯಿಸುವ ವೇಳೆ ನಿಯಮ ಉಲ್ಲಂಘಿಸಿದ್ದಾಗ ಕಾರ್‌ನಿಂದ ಹೊರಕ್ಕೆ ಇಳಿಸಲು ಪ್ರಯತ್ನಿಸಿದ್ದರು. ಫ್ರಾನ್ಸ್‌ನಲ್ಲಿ ವಾಹನ ಚಲಾಯಿಸಲು ಪರವಾನಗಿ ಹೊಂದುವಷ್ಟು ಆತನಿಗೆ ವಯಸ್ಸಾಗಿರಲಿಲ್ಲ. ಸಂಚಾರ ದೀಪದ ಅಡಿ ಮರ್ಸಿಡಿಸ್ ಕಾರು ನಿಲ್ಲಿಸಬೇಕಿತ್ತು. ಕಾರು ನಿಲ್ಲಿಸುವಂತೆ ಪೊಲೀಸರು ಸೂಚಿಸಿದ್ದರು. ಆದರೆ ಬಂದೂಕು ತೋರಿಸಿದರೂ ಚಾಲಕ ಕಾರು ನಿಲ್ಲಿಸಿ ಇಳಿಯಲಿಲ್ಲ. ಇದರಿಂದ ಪೊಲೀಸರು ಗುಂಡು ಹಾರಿಸಿದ್ದಾರೆ. ಗುಂಡು ಚಾಲಕನ ಕೈ ಹಾಗೂ ಎದೆಗೆ ಹೊಕ್ಕಿದೆ. ಆತನಿಗೆ ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಆದರೆ ಅದು ಸಫಲವಾಗಿರಲಿಲ್ಲ.
ಫ್ರಾನ್ಸ್‌ನಲ್ಲಿ 2017ರಲ್ಲಿ ಇಲ್ಲಿನ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು 5 ಗಂಭೀರ ಬಗೆಯ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಪೊಲೀಸರು ವಾಹನ ಸವಾರರ ಮೇಲೆ ಗುಂಡು ಹಾರಿಸುವ ಅವಕಾಶ ನೀಡಲಾಗಿದೆ. ಆದರೆ ಇದಕ್ಕೆ ಜನರ ವಿರೋಧವಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.