ವನವಾಸಿ ಸಂಸ್ಥೆಯ ರುಕ್ಮಿಣಿ ಬಾಲಿಕಾ ವಸತಿ ನಿಲಯಕ್ಕೆ ಆಹಾರ ವಸ್ತುಗಳ ವಿತರಣೆ

ದಾಂಡೇಲಿ : ನಗರದ ಕುಳುಗಿ ರಸ್ತೆಯಲ್ಲಿರುವ ವನವಾಸಿ ಕಲ್ಯಾಣ ಸಂಸ್ಥೆಯ ರುಕ್ಮಿಣಿ ಬಾಲಿಕಾ ವಸತಿ ನಿಲಯಕ್ಕೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಧಿಕಾರಿ ವೆಂಕಟೇಶ್ ಪಾಂಡೆಯವರ ನೇತೃತ್ವದಲ್ಲಿ ರೂ: 11 ಸಾವಿರ ಮೌಲ್ಯದ ಪಡಿತರ ವಸ್ತುಗಳನ್ನು ಇಂದು ಶುಕ್ರವಾರ ವಿತರಿಸಲಾಯ್ತು.

ಆಹಾರ ಪಡಿತರ ವಸ್ತುಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಕಾಗದ ಕಾರ್ಖಾನೆಯ ಪೇಪರ್ ಗೋಡೌನ್ ವಿಭಾಗದ ಅಧಿಕಾರಿಯಾಗಿರುವ ಸುಧೀರ್ ಪಾಟ್ನಯಕ್ ಅವರು ಭಾಗವಹಿಸಿ ಶಿಕ್ಷಣಕ್ಕೆ ನೀಡುವ ನೆರವು ರಾಷ್ಟ್ರದ ಪ್ರಗತಿಗೆ ಸಹಕಾರಿ ಎಂದರು.

ಕಾರ್ಯಕ್ರಮದ ರೂವಾರಿ ವೆಂಕಟೇಶ್ ಪಾಂಡೆಯವರು ಮಾತನಾಡಿ ಬುಡಕಟ್ಟು ಸಮುದಾಯದ ಹಾಗೂ ಇನ್ನಿತರ ಬಡ ಕುಟುಂಬದ ವಿದ್ಯಾರ್ಥಿನಿಯರು ರುಕ್ಮಿಣಿ ಬಾಲಿಕಾ ಕೇಂದ್ರದಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವನವಾಸಿ ಕಲ್ಯಾಣ ಸಂಸ್ಥೆಯು ಕಳೆದ ಅನೇಕ ವರ್ಷಗಳಿಂದ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಾ ಬಂದಿದೆ. ಇವರ ನಿರಂತರವಾದ ಸೇವೆಗೆ ನಮ್ಮದೊಂದು ಇದು ಅಲ್ಪ ಕಾಣಿಕೆಯಾಗಿದೆ. ನಮ್ಮ ಈ ಕಾರ್ಯಕ್ಕೆ ನಮ್ಮ ಗೆಳೆಯರ ಬಳಗವು ಅತ್ಯಂತ ಹರ್ಷಿತ ಮನಸ್ಸಿನಿಂದ ಸಹಕಾರವನ್ನು ನೀಡುತ್ತಾ ಬಂದಿದೆ ಎಂದರು.

ಈ ಸಂದರ್ಭದಲ್ಲಿ ಅಜೀತ್ ಗೋಟೆ, ರಾಹುಲ್ ಬನಸೋಡೆ, ಬಸವನಗೌಡ ಪಾಟೀಲ್, ಪಾರ್ಥ್ ವೆಂಕಟೇಶ್ ಪಾಂಡೆ, ರಾಘವೇಂದ್ರ ನಾಯ್ಕ, ಪ್ರಶಾಂತ್ ಹಾಗೂ ವನವಾಸಿ ಕಲ್ಯಾಣ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ವೆಂಕಟೇಶ್ ಪಾಂಡೆಯವರ ನೇತೃತ್ವದಲ್ಲಿ ಗೆಳೆಯರ ಬಳಗದ ವತಿಯಿಂದ ರುಕ್ಮಿಣಿ ಬಾಲಿಕಾ ವಸತಿ ನಿಲಯದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರತಿವರ್ಷ ವಿವಿಧ ರೀತಿಗಳಲ್ಲಿ ನೆರವು ನೀಡುತ್ತಾ ಬರಲಾಗುತ್ತಿದೆ.