ರೈಲಿಗಾಗಿ ಕಾಯುತ್ತ ಪ್ಲ್ಯಾಟ್ಫಾರ್ಮ್ ಮೇಲೆಯೇ ನಿದ್ದೆ ಹೋಗಿದ್ದ ಪ್ರಯಾಣಿಕರನ್ನು ಪೊಲೀಸರೊಬ್ಬರು ಬಾಟಲಿಯಿಂದ ಅವರ ಮುಖದ ಮೇಲೆ ಸುರಿಯುತ್ತ ಎಬ್ಬಿಸುತ್ತಿರುವ ದೃಶ್ಯ ಇದೀಗ ವೈರಲ್ ಆಗುತ್ತಿದೆ. ಜೂ. 30ರಂದು ಸ್ವೀಡನ್ ಉಪ್ಸಲಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಾಕರಾಗಿರುವ ಮತ್ತು ಗಲ್ಫ್ ನ್ಯೂಸ್ ಅಂಕಣಕಾರರೂ ಆಗಿರುವ ಅಶೋಕ್ ಸ್ವೈನ್ ಈ ವಿಡಿಯೋ ಟ್ವೀಟ್ ಮಾಡಿ, ದೇಶದ ಹೃದಯ ಮತ್ತು ಬುದ್ಧಿಗೆ ಏನಾಗಿದೆ ಎಂದು ಪ್ರಶ್ನಿಸಿದ್ದಾರೆ. ಈ ವಿಡಿಯೋ ಅನ್ನು ಇದೀಗ ಸುಮಾರು 1 ಲಕ್ಷ ಜನರು ವೀಕ್ಷಿಸಿದ್ದು, 5,000ಕ್ಕಿಂತಲೂ ಹೆಚ್ಚು ಜನ ರೀಟ್ವೀಟ್ ಮಾಡಿ ಆಕ್ರೋಶ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ಧಾರೆ.
ಒಬ್ಬ ಐಐಟಿಯನ್ ಮತ್ತು ಮಾಜಿ ಐಎಎಸ್ ಅಧಿಕಾರಿಯನ್ನು ರೈಲ್ವೇ ಮಂತ್ರಿಯಾಗಿ ಪಡೆದ ನಾವುಗಳು ಅದೃಷ್ಟವಂತರು. ಅವರ ಶೈಕ್ಷಣಿಕ ಅರ್ಹತೆಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಸಣ್ಣ ಘಟನೆಗಳನ್ನು ನಿರ್ಲಕ್ಷಿಸಬೇಕು ಎಂದು ಒಬ್ಬರು ಬೇಸರದಿಂದ ವ್ಯಂಗ್ಯವಾಡಿದ್ದಾರೆ. ಪೊಲೀಸರು ಬಡವರೊಂದಿಗೆ ಅತ್ಯಂತ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಇಷ್ಟು ಕೀಳಾಗಿ ಕಂಡ ಈ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು ಎಂದು ಮತ್ತೊಬ್ಬರು ಒತ್ತಾಯಿಸಿದ್ಧಾರೆ.
ವಿಮಾನ ನಿಲ್ದಾಣದಲ್ಲಿ ಮೇಲ್ವರ್ಗ ಮತ್ತು ಗಣ್ಯವ್ಯಕ್ತಿಗಳೊಂದಿಗೂ ಪೊಲೀಸರು ಹೀಗೆಯೇ ವರ್ತಿಸುತ್ತಾರೆಯೇ ಅಥವಾ ಈ ಹಿಂದೆ ವರ್ತಿಸಿದ ಉದಾಹರಣೆಗಳಿವೆಯೇ? ಅಲ್ಲದೆ ನಮ್ಮ ದೇಶಕ್ಕೆ ಐಷಾರಾಮಿ ಮತ್ತು ಅತೀವೇಗದ ರೈಲುಗಳು ಅಗತ್ಯವಿದೆಯೇ, ಇಂಥವರ ಕೈಗೆ ಅವು ಎಟಕುತ್ತವೆಯೇ? ಹೀಗಾಗಿ ಸಾಮಾನ್ಯ ದರ್ಜೆಯ ರೈಲುಗಳಿಗಾಗಿ ಕಾಯುತ್ತ ಅಸಹಾಯಕತನದಿಂದ ಅವರು ನಿದ್ದೆಗೆ ಜಾರಿದ್ದಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಸರ್ಕಾರವು ಮೊದಲು ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಬೇಕು. ರೈಲ್ವೇ ಪೊಲೀಸರ ಇಂಥ ಕೆಟ್ಟ ನಡತೆ ಮತ್ತು ಅನ್ಯಾಯವನ್ನು ಬಗ್ಗುಬಡಿಯಬೇಕು ಎಂದಿದ್ದಾರೆ ಅನೇಕರು.
ನಾಗರಿಕರನ್ನು ಸಮಾನವಾಗಿ ಮತ್ತು ಘನತೆಯಿಂದ ನಡೆಸಿಕೊಳ್ಳುವ ಬಗ್ಗೆ ನಾವು ಯಾಕೆ ಪ್ರಶ್ನಿಸಬಾರದು? ಸರ್ಕಾರ ನೌಕರರಿಗೆ ಸಂಬಳ ನೀಡುತ್ತದೆ ಎಂದು ಮನಬಂದಂತೆ ಸಾರ್ವಜನಿಕರೊಂದಿಗೆ ವರ್ತಿಸಬಹುದೆ? ಜನಸಾಮಾನ್ಯರ ವಿಶ್ರಾಂತಿಗಾಗಿ ರೈಲ್ವೆ ಇಲಾಖೆಯು ವಿಶ್ರಾಂತಿ ಕೊಠಡಿಗಳನ್ನು ಒದಗಿಸಬೇಕು ಎಂದು ಹೇಳಿದ್ದಾರೆ ಅನೇಕರು.