ಧಾರವಾಡ (ಜು.1): ಬರೋಬ್ಬರಿ 34 ವರ್ಷಗಳ ಕಾಲ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಒಂದೂ ಅಪಘಾತ ಇಲ್ಲದೇ ಅತ್ಯುತ್ತಮ ಚಾಲಕ ಎಂದು ಮುಖ್ಯಮಂತ್ರಿಗಳಿಂದ ಬಿರುದು ಪಡೆದಿರುವ ಗಿರಿಗೌಡ ಸಿದ್ದಾಪೂರ ಅವರು ಶುಕ್ರವಾರ ಸೇವಾ ನಿವೃತ್ತಿ ಹೊಂದಿದರು.
ಕೆಲಗೇರಿ ನಿವಾಸಿ ಆಗಿರುವ ಗಿರಿಗೌಡ ಅವರಿಗೆ ಇಲ್ಲಿಯ ಬಸ್ ಡಿಪೋದಲ್ಲಿ ಗುರುವಾರ ಸಾರಿಗೆ ಸಂಸ್ಥೆಯಿಂದ ಸೇವಾ ನಿವೃತ್ತಿ ಗೌರವ ನೀಡಲಾಯಿತು. ಗಿರಿಗೌಡ ಅವರು 1989ರಲ್ಲಿ ಧಾರವಾಡ ವಿಭಾಗದಿಂದ ಸೇವೆ ಆರಂಭಿಸಿ ತಿರುಪತಿ, ಬಾಗಲಕೋಟೆ, ಧಾರವಾಡ ಗ್ರಾಮೀಣ ಭಾಗದಲ್ಲಿ 14 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಇನ್ನುಳಿದ 20 ವರ್ಷಗಳ ಸೇವೆಯನ್ನು ಧಾರವಾಡ -ಕೆಲಗೇರಿ ಆಂಜನೇಯ ನಗರ ಮಾರ್ಗದಲ್ಲಿ ಸಲ್ಲಿಸಿದ್ದು, ಧಾರವಾಡ ವಿಭಾಗದಲ್ಲಿ ದಾಖಲೆಯೇ ಸರಿ. 2007ರಲ್ಲಿ 15 ವರ್ಷಗಳ ಕಾಲ ಅಪಘಾತ ರಹಿತ ಚಾಲನೆಗೆ ಮುಖ್ಯಮಂತ್ರಿ ಪದಕ ಪಡೆದಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಧಾನ ಮಾಡಿದ್ದರು. ಹುಬ್ಬಳ್ಳಿ ವಿಭಾಗದಿಂದ ಸುರಕ್ಷಾ ಚಾಲಕ ಪ್ರಶಸ್ತಿ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಡೀಪೋ ಮ್ಯಾನೇಜರ್ ಮಲ್ಲಪ್ಪ ಜಿರಿಗವಾಡ, ಸುಮಾರು ಮೂರು ದಶಕಗಳ ಕಾಲ ಸಂಸ್ಥೆಯಲ್ಲಿ ಜವಾಬ್ದಾರಿಯುತ ಸೇವೆ ಸಲ್ಲಿಸಿದ್ದಾರೆ. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದರು.
ಘಟಕ ವ್ಯವಸ್ಥಾಪಕ ಅನಿಲಕುಮಾರ ಹಳ್ಳದ, ಸಂಚಾರಿ ನಿರೀಕ್ಷಕರಾದ ಸಂಗಮೇಶ ಮಸ್ಕಿ, ನಿರ್ವಾಹಕ ಸಂಜು ಪುಡಕಲಕಟ್ಟಿ, ಚಾಲಕರಾದ ಎಸ್.ವಿ. ಭಾಸ್ಲಾಪುರ ಸೇರಿದಂತೆ ಹಲವರು ಇದ್ದರು. ಗಿರಿಗೌಡ ಸೇರಿದಂತೆ ನಿರ್ವಾಹಕ ಈರಣ್ಣ ಉಳ್ಳಿಗೇರಿ ಸಹ ಗುರುವಾರ ನಿವೃತ್ತಿ ಹೊಂದಿದರು.