ಕೊಪ್ಪಳ: ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ವೇಳೆ ನಿರಂತರವಾಗಿ ಬಿಜೆಪಿ ಪರ ಪ್ರಚಾರ ಮಾಡಿದ್ದ ಆರೋಪದಡಿ ಸರ್ಕಾರಿ ನೌಕನಿಗೆ ಶಿಕ್ಷಣ ಇಲಾಖೆ ಆಯುಕ್ತರು ಅಮಾನತು ಆದೇಶ ಹೊರಡಿಸಿದ್ದಾರೆ. ಹೌದು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಅಯ್ಯಣ್ಣ ಮರದೂರು ಎಂಬಾತ ಚುನಾವಣಾ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದ ಎಂದು ಆರೋಪಿಸಿ ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆಯಿಂದ ದೂರು ನೀಡಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿ, ಕಲಬುರಗಿ ವಿಭಾಗದ ಆಯುಕ್ತ ಆನಂದ ಪ್ರಕಾಶ ಮೀನಾ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ.
ಕಲಬುರಗಿ: ಸಮಾಜ ಕಲ್ಯಾಣ ಇಲಾಖೆಯ ಸೇಡಂ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ವಸತಿ ನಿಲಯದ ವಾರ್ಡನ್ ಯಶೋಧಮ್ಮ ಎನ್ನುವವರನ್ನ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಕಾರಣ ಅವರನ್ನು ಅಮಾನತ್ತು ಮಾಡಿ ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಆದೇಶಿಸಿದ್ದರು. ಮಾರ್ಚ್ 21 ರಂದು ಸೇಡಂ ತಾಲೂಕಿನ ಮಳಖೇಡ್ ಆದಿತ್ಯಾ ಕಾಲೋನಿಯಲ್ಲಿ ರಾಜಕೀಯ ಪಕ್ಷದ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿತ್ತು. ಈ ಹಿನ್ನೆಲೆ ಅಮಾನತು ಮಾಡಲಾಗಿತ್ತು.