ಅಬ್ಬಬ್ಬಾ..ಈ ವ್ಯಕ್ತಿ 60 ವರ್ಷದಿಂದ ಮಲಗೇ ಇಲ್ವಂತೆ..ಇದೆಂಥಾ ವಿಚಿತ್ರ ಕಾಯಿಲೆ!

ವಿಯೆಟ್ನಾಂನ 80 ವರ್ಷದ ವ್ಯಕ್ತಿಯೊಬ್ಬರು ತಮ್ಮ ಬಾಲ್ಯದಲ್ಲಿ ಜ್ವರದಿಂದ ನಿದ್ದೆ ಮಾಡಲು ಅಸಮರ್ಥರಾದ ನಂತರ ಒಮ್ಮೆಯೂ ನಿದ್ದೆ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಥಾಯ್ ಎನ್‌ಗೊಕ್ ಎಂಬವರು 1962ರಿಂದ ನಿದ್ದೆಯ ಕೊರತೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಚ್ಚರಿ ಎನಿಸಿದರೂ ಇದು ನಿಜ. ಥಾಯ್ ಎನ್‌ಗೊಕ್ ಮಲಗಿದ್ದನ್ನು ನೋಡಿಲ್ಲ ಎಂದು ಅವರ ಕುಟುಂಬ ಸದಸ್ಯರು, ಸ್ನೇಹಿತರು, ನೆರೆಮನೆಯವರು ಸಹ ತಿಳಿಸಿದ್ದಾರೆ. ಅನೇಕ ವೈದ್ಯಕೀಯ ತಜ್ಞರು ಅವರ ಅಸ್ವಸ್ಥತೆಯನ್ನು ಪರೀಕ್ಷಿಸಿದ್ದಾರೆ. ಮತ್ತು ಥಾಯ್‌ ಎನ್‌ಗೊಕ್‌ ಹಲವಾರು ವರ್ಷಗಳಿಂದ ನಿದ್ದೆ ಮಾಡಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ವೈದ್ಯಕೀಯ ಪರೀಕ್ಷೆಯಲ್ಲಿ ಥಾಯ್‌ ಶಾಶ್ವತ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ ಎಂಬುದು ತಿಳಿದುಬಂತು. ಆದರೆ ಆಶ್ಚರ್ಯಕರವಾಗಿ, 80 ವರ್ಷದ ಈ ವ್ಯಕ್ತಿಗೆ ವಿಶ್ರಾಂತಿ ಇಲ್ಲದ ಕಾರಣದಿಂದಾಗಿ ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದಿಲ್ಲ. ಯೂಟ್ಯೂಬರ್ ಒಬ್ಬರು ಥಾಯ್‌ ನಿದ್ದೆ ಮಾಡುತ್ತಿಲ್ಲ ಎಂಬುದನ್ನು ಪರಿಶೀಲಿಸಲು ವಿಯೆಟ್ನಾಂನ ಹಳ್ಳಿಯೊಂದಕ್ಕೆ ತೆರಳಿದರು. ಇಲ್ಲಿ ಯೂಟ್ಯೂಬರ್ ಒಂದು ರಾತ್ರಿ ಥಾಯ್‌ ಜೊತೆಗೆ ಉಳಿದುಕೊಂಡರು. ಈ ಸಂದರ್ಭದಲ್ಲಿ ಅವರು ಸಂಪೂರ್ಣ ದಿನ ನಿದ್ದೆ ಮಾಡುವುದಿಲ್ಲ ಎಂಬುದು ತಿಳಿದುಬಂತು.

ವಿಯೆಟ್ನಾಂ ಯುದ್ಧದ ಸಮಯದಲ್ಲಿ ಎನ್‌ಗೊಕ್‌ ಈ ಸಮಸ್ಯೆಯನ್ನು ಅನುಭವಿಸಲು ಶುರು ಮಾಡಿದರು. ಅವರೊಂದಿಗಿನ ಸಂಭಾಷಣೆಯಲ್ಲಿ, ಎನ್‌ಗೊಕ್ ಅವರು ‘ಗ್ರೀನ್ ಟೀ ಮತ್ತು ರೈಸ್ ವೈನ್’ ನಿಂದ ಮೂಲಭೂತ ಮಾನವ ಕಾರ್ಯಚಟುವಟಿಕೆಗೆ ಅಗತ್ಯವಾದ ಶಕ್ತಿಯನ್ನು ಪಡೆಯುತ್ತಾರೆ ಎಂದು ಬಹಿರಂಗಪಡಿಸಿದರು. ಆದರೆ ಅವರು ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಹತಾಶೆಯನ್ನು ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಕೆಲವು ಊಹಾಪೋಹಗಳ ಆಧಾರದ ಮೇಲೆ, 1955 ರಿಂದ 1975 ರ ನಡುವೆ ಉಂಟಾದ ಯುದ್ಧ ಎನ್‌ಗೊಕ್‌ನ ನಿದ್ರೆಯ ಕೊರತೆಯ ಹಿಂದಿನ ಪ್ರಮುಖ ಕಾರಣ ಆಗಿರಬಹುದು ಎಂದು ಹೇಳಲಾಗುತ್ತಿದೆ. ಅಂತರ್ಜಾಲದಲ್ಲಿ ಜನರು ಎನ್‌ಗೊಕ್‌ನ ಕಥೆಯನ್ನು ದುರಂತ ಮತ್ತು ಅದ್ಭುತವೆಂದು ಕಂಡುಕೊಂಡರು.