ವಿದ್ಯುತ್ ಕಡಿತದಿಂದ 3 ರೋಗಿಗಳ ಸಾವು ಪ್ರಕರಣ -ಸರ್ಕಾರ ಬದಲಾದ ಮೇಲೆ ವರಸೆ ಬದಲಿಸಿದ ಉಸ್ತುವಾರಿ ಸಚಿವ

ಆ ಆಸ್ಪತ್ರೆಯಲ್ಲಿ ರೋಗಿಗಳು ನರಳಿ ನರಳಿ‌‌ ಸಾವನ್ನಪ್ಪಿದ್ದರು. ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ಮೂವರು ರೋಗಿಗಳು ಮೃತಪಟ್ಟಿದ್ರು. ರೋಗಿಗಳ ಸಾವು ಸಾಕಷ್ಟು ಸದ್ದು ಮಾಡಿ ಸದನದಲ್ಲೂ ಕೋಲಾಹಲ ಸೃಷ್ಟಿ ಮಾಡಿತ್ತು. ಅಂದು ಸರ್ಕಾರ ತನಿಖಾ ತಂಡ ಸಹ ರಚನೆ ಮಾಡಿತ್ತು. ಆದ್ರೆ ತನಿಖಾ ತಂಡ ಸರ್ಕಾರಕ್ಕೆ ವರದಿ ಸಲ್ಲಿಸಿದ ನಂತರವೂ ಘೋಷಿಸಿದ ಪರಿಹಾರ ಮಾತ್ರ ಇನ್ನೂ ಸಂತ್ರಸ್ತರಿಗೆ ಸಿಕ್ತಿಲ್ಲ. ಅಂದು ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ಮಾಡಿದವರು ಇಂದು ಅದೇ ಪರಿಹಾರದ ಹಣ ಕೊಡಿಸಲು ಮೀನಾಮೇಷ ಏಣಿಸುತ್ತಿದ್ದಾರೆ ನೋಡಿ. ದುಡಿಮೆ ಮಾಡುತ್ತಿದ್ದ ಗಂಡ, ಸಾಕಿ ಬೆಳಸಬೇಕಾದ ತಂದೆಯನ್ನು ಕಳೆದುಕೊಂಡು ಕಂಗಾಲಾಗಿರುವ ಪತ್ನಿ-ಮಕ್ಕಳು. ಸಂಬಂಧಿಕರನ್ನ ಕಳೆದುಕೊಂಡು ಪರಿಹಾರದ ಹಣಕ್ಕಾಗಿ ಅಲೆದಾಡುತ್ತಿರುವ ಸಂತ್ರಸ್ತರು. ಸಚಿವರ ಮುಂದೆ ನೋವು ತೋಡಿಕೊಂಡು ಸಹಾಯ ಮಾಡಿ ಅಂತಿರುವ ಮಹಿಳೆಯರು. ಯೆಸ್‌. ಇದು ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ   ವಿದ್ಯುತ್ ಕಡಿತದಿಂದ ಪ್ರಾಣ ಕಳೆದುಕೊಂಡ ಸಂತ್ರಸ್ತ ಕುಟುಂಬಗಳು ಪರಿಹಾರದ ಹಣಕ್ಕಾಗಿ ಪರದಾಡುತ್ತಿರುವ ದೃಶ್ಯಗಳು.

ಅದು 2022 ರ ಸಪ್ಟೆಂಬರ್ 14. ಅಂದು ಬೆಳ್ಳಂಬೆಳ್ಳಗ್ಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ವಿದ್ಯುತ್ ಸರಬರಾಜು ಕೈ ಕೊಟ್ಟ ಪರಿಣಾಮ MICU ನಲ್ಲಿದ್ದ ಮೂವರು ರೋಗಿಗಳು ಸಾವನ್ನಪ್ಪಿದ್ರು. ವಿದ್ಯುತ್ ಸಂಪರ್ಕ ಕಡಿತಗೊಂಡು ರೋಗಿಗಳು ಸಾವನ್ನಪ್ಪಿದ ವಿಚಾರ ಸಾಕಷ್ಟು ಸದ್ದು ಮಾಡಿದ ಬಳಿಕ ಸದನದಲ್ಲೂ ಕೋಲಾಹಲ ಸೃಷ್ಟಿಯಾಗಿತ್ತು. ವಿಪಕ್ಷಗಳ ವಾಗ್ದಾಳಿ ನಂತರ ಎಚ್ಚೆತ್ತುಕೊಂಡ ಸರ್ಕಾರ ತನಿಖೆಗೆ ಸಮಿತಿ ರಚಿಸಿ ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಭರವಸೆ‌ ನೀಡಿತ್ತು. ಐವರು ಸದಸ್ಯರ ನೇತೃತ್ವದ ತನಿಖಾ ತಂಡ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಹಲವು ತಿಂಗಳುಗಳೆ ಕಳೆದಿವೆ. ಆದ್ರೆ ಘಟನೆ ನಡೆದು 10 ತಿಂಗಳಾದ್ರು ಸಾವನ್ನಪ್ಪಿದ ರೋಗಿಗಳ ಕುಟುಂಬಕ್ಕೆ ಇದೂವರೆಗೂ ಸರ್ಕಾರದಿಂದ ಬಿಡಿಗಾಸು ಪರಿಹಾರವೂ ದೊರೆತಿಲ್ಲ. ಸರ್ಕಾರ ಘೋಷಿಸಿದ 5 ಲಕ್ಷ ರೂಪಾಯಿ ಪರಿಹಾರದ ಹಣಕ್ಕಾಗಿ ಸಂತ್ರಸ್ತ ಬಡ ಕುಟುಂಬದ ಸದಸ್ಯರ ಅಲೆದಾಟ ಸಹ ತಪ್ಪಿಲ್ಲ. ಪರಿಹಾರದ ಹಣ ಕೊಡಿ ಅಂತಾ ಮೃತರ ಸಂಬಂಧಿಕರು ಇಂದಿಗೂ ಅಲೆದಾಡುತ್ತಿದ್ದಾರೆ ನೋಡಿ.

ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ಹಾವು‌ ಕಚ್ಚಿ ಆಸ್ಪತ್ರೆಯ ಐಸಿಯು ವಾರ್ಡ್ ಗೆ ದಾಖಲಾಗಿದ್ದ ಮೌಲಾ ಹುಸೇನ್ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಚೆಟ್ಟೆಮ್ಮ ಹಾಗೂ ಮತ್ತೋರ್ವ ರೋಗಿ ಸಾವನಪ್ಪಿದ್ದರು. ಆದ್ರೆ ಅಂದಿನ ಸರ್ಕಾರ ಇಬ್ಬರ ಸಾವಿನ ಬಗ್ಗೆ ತನಿಖೆಯ ವರದಿ ಬಂದ ಬಳಿಕ ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು. ತನಿಖಾ ತಂಡ ಸರ್ಕಾರಕ್ಕೆ ವರದಿ ಸಲ್ಲಿಸಿ ಹಲವು ತಿಂಗಳುಗಳೇ ಕಳೆದಿವೆ. ಅಲ್ಲದೇ ಅಂದು ಶಾಸಕರಾಗಿದ್ದ ಇಂದಿನ ಸಚಿವ ಬಿ ನಾಗೇಂದ್ರ ಪರಿಹಾರ ನೀಡುವಂತೆ ಪ್ರತಿಭಟನೆ ನಡೆಸಿ ಸದನದಲ್ಲೂ ಹೋರಾಟ ಮಾಡಿದ್ರು. ಆದ್ರೀಗ ಕಾಂಗ್ರೆಸ್ ಶಾಸಕ ಬಿ ನಾಗೇಂದ್ರರೇ ಉಸ್ತುವಾರಿ ಸಚಿವರಾಗಿದ್ದಾರೆ. ಹೀಗಾಗಿ ಪರಿಹಾರದ ಹಣಕ್ಕಾಗಿ ಸಂತ್ರಸ್ತ ಕುಟುಂಬದವರು ಸಚಿವರಿಗೆ ಪರಿಹಾರದ ಹಣ ಕೊಡಿಸುವಂತೆ ಮನವಿ ಮಾಡುತ್ತಿದ್ದಾರೆ.

ಮೂವರು ರೋಗಿಗಳ ಸಾವಿಗೆ ವಿದ್ಯುತ್ ಸಂಪರ್ಕ ಕಡಿತವೇ ಕಾರಣ ಅನ್ನೋದು ರೋಗಿಗಳ ಸಂಬಂಧಿಕರ ಆರೋಪ. ಆದ್ರೆ ರೋಗಿಗಳು ತೀವ್ರತರದ ಕಾಯಿಲೆಗಳಿಂದ ಬಳಲುತ್ತಿದ್ರು. ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ ಅನ್ನೋದು ವಿಮ್ಸ್ ನ ವಾದ. ಹೀಗಾಗಿ ತನಿಖಾ ತಂಡ ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಸಿದ್ದರೂ ಸರ್ಕಾರ ಮಾತ್ರ ಇದೂವರೆಗೂ ಪರಿಹಾರದ ಹಣ ನೀಡಿಲ್ಲ. ಹೀಗಾಗಿ ರೋಗಿಗಳ ಸಾವಿಗೆ ಎನೇ ಕಾರಣವಿದ್ರು ಸರ್ಕಾರ ಘೋಷಿಸಿದ ಪರಿಹಾರದ ಹಣವನ್ನ ಮಾನವೀಯತೆ ಆಧಾರದ ಮೇಲಾದರೂ ಬಡಕುಟುಂಬಗಳಿಗೆ ಪರಿಹಾರದ ನೀಡಲಿ ಅನ್ನೋದು ಸಂತ್ರಸ್ತ ಕುಟುಂಬದ ವಾದ. ಅಂದು ಪರಿಹಾರ ನೀಡಿ ಅಂತಾ ಹೋರಾಟ ಮಾಡಿದ ಇಂದಿನ ಸಚಿವರ ಪರಿಹಾರ ಕೊಡಿಸ್ತಾರಾ, ಇಲ್ವೋ? ಅನ್ನೋದನ್ನ ಕಾಯ್ದುನೋಡಬೇಕಿದೆ..