ಟ್ರಕ್ ಅಪಘಾತ, ಮೂರು ಟ್ರಕ್​ಗಳಿಗೆ ಹೊತ್ತಿಕೊಂಡ ಬೆಂಕಿ, ಐದು ಮಂದಿ ಹಾಗೂ 12 ಪ್ರಾಣಿಗಳ ಸಜೀವ ದಹನ

ಜೈಪುರ-ಅಜ್ಮೇರ್ ರಸ್ತೆಯಲ್ಲಿ ನಿಂತಿದ್ದ ಎರಡು ಟ್ರಕ್​ಗಳಿಗೆ ಮತ್ತೊಂದು ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಐವರು ಸಜೀವ ದಹನಗೊಂಡಿದ್ದಾರೆ. ದನಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಸೇರಿದಂತೆ ಎಲ್ಲಾ ಮೂರು ವಾಹನಗಳು ಸುಟ್ಟುಹೋಗಿದ್ದು, 12 ಪ್ರಾಣಿಗಳು ಸಹ ಸುಟ್ಟು ಕರಕಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಜೈಪುರ ಗ್ರಾಮಾಂತರದ ದುಡು ಪ್ರದೇಶದಲ್ಲಿ ಮುಂಜಾನೆ 5.30ರ ಸುಮಾರಿಗೆ ಅಪಘಾತ ಸಂಭವಿಸಿದೆ.

ಡಿಕ್ಕಿಯ ನಂತರ ಬೆಂಕಿ ಟ್ರಕ್‌ಗಳನ್ನು ಆವರಿಸಿತ್ತು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ದಿನೇಶ್ ಶರ್ಮಾ ತಿಳಿಸಿದ್ದಾರೆ. ಒಂದು ಟ್ರಕ್‌ನ ಚಾಲಕ ಸೇರಿದಂತೆ ಐದು ಜನರು ಬೆಂಕಿಯಲ್ಲಿ ಸಜೀವ ದಹನವಾಗಿದ್ದಾರೆ ಎಂದು ಇನ್ನೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪವನ್ (28), ಸಂಜು (18), ಧರಮ್‌ವೀರ್ (34) ಹರ್ಯಾಣದ ನಿವಾಸಿಗಳಾಗಿದ್ದಾರೆ, ಬಿಹಾರದ ಛಾಪ್ರಾ ಮೂಲದ ಇಬ್ಬರು – ಜಾನ್ ವಿಜಯ್ (35) ಮತ್ತು ಬಿಜ್ಲಿ (26) ಕೂಡ ಟ್ರಕ್‌ನಲ್ಲಿದ್ದರು ಎಂದು ದುಡು ಜುಲ್ಫಿಕರ್ ಅವರ ಸರ್ಕಲ್ ಅಧಿಕಾರಿ ತಿಳಿಸಿದ್ದಾರೆ.

ಎರಡು ಟ್ರಕ್‌ಗಳು ರಸ್ತೆಬದಿಯಲ್ಲಿ ನಿಂತಿದ್ದವು. ಹರಿಯಾಣದಿಂದ ಪುಣೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಟ್ರಕ್ ಅವುಗಳಲ್ಲಿ ಒಂದಕ್ಕೆ ಡಿಕ್ಕಿ ಹೊಡೆದಿದೆ. ಬೆಳಗಿನ ಜಾವವಾಗಿದ್ದರಿಂದ ಆತ ಚಾಲಕ ನಿದ್ದೆಗಣ್ಣಿನಲ್ಲಿ ಟ್ರಕ್ ಚಲಾಯಿಸಿರಬಹುದು ಎನ್ನಲಾಗಿದೆ. ಹೆದ್ದಾರಿಯ ಬದಿಯಲ್ಲಿ ಅಪಘಾತ ಸಂಭವಿಸಿದ್ದರಿಂದ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಂದರೆಯಾಗಿಲ್ಲ ಎಂದು ಅವರು ಹೇಳಿದರು .

ರಸ್ತೆಬದಿಯಲ್ಲಿ ನಿಲ್ಲಿಸಲಾಗಿದ್ದ ಎರಡು ಟ್ರಕ್‌ಗಳಲ್ಲಿ ಒಂದರಲ್ಲಿ ನೂಲಿನ ಬಂಡಲ್‌ಗಳಿದ್ದರೆ, ಎರಡನೇ ಟ್ರಕ್‌ನಲ್ಲಿ ಪ್ಲಾಸ್ಟಿಕ್ ಚೀಲಗಳಿದ್ದವು ಎಂದು ಅಧಿಕಾರಿ ತಿಳಿಸಿದ್ದಾರೆ.

ಡಿಕ್ಕಿಯ ರಭಸಕ್ಕೆ ಟ್ರಕ್‌ಗಳ ಡೀಸೆಲ್ ಟ್ಯಾಂಕ್‌ಗಳು ಜಖಂಗೊಂಡು ನೂಲು, ಪ್ಲಾಸ್ಟಿಕ್ ಚೀಲಗಳಂತಹ ಸರಕುಗಳು ಇದ್ದುದರಿಂದ ಬೆಂಕಿ ಹೊತ್ತಿಕೊಂಡಿತು ಎಂದು ಅವರು ಹೇಳಿದರು.

ಫೋರೆನ್ಸಿಕ್ ತಂಡವು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದು, ಮರಣೋತ್ತರ ಪರೀಕ್ಷೆಯನ್ನೂ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೈಪುರ ಜಿಲ್ಲಾಧಿಕಾರಿ ಪ್ರಕಾಶ್ ರಾಜಪುರೋಹಿತ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.