5 ಗಂಟೆ ಓಡಿಸಿದರೂ 40 ರೂ ಅಷ್ಟೇ ಆಟೋ ಬಾಡಿಗೆ ಹಣ ಬಂದಿರುವುದು. ಇಂತಹ ದುರ್ಭರ ಪರಿಸ್ಥಿತಿಯಲ್ಲಿ ಜೀವನದ ದಿಕ್ಕುಗಾಣದೆ ಅಳುತ್ತಾ ಮನೆಯತ್ತ ಗಾಡಿ ತಿರುಗಿಸಿದ ಬೆಂಗಳೂರು ಆಟೋ ಚಾಲಕ ಗೋಳಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಬೆಂಗಳೂರಿನ ಆಟೋ ಚಾಲಕನೊಬ್ಬ ಕಾಣಿಸಿಕೊಂಡಿದ್ದಾನೆ. ಇತ್ತೀಚಿನ ದಿನಗಳಲ್ಲಿ ಆಟೋ ಬಾಡಿಗೆ ಬಿದ್ದುಹೋಗಿದ್ದು, ಅತ್ಯಂತ ಕಡಿಮೆ ಬಾಡಿಗೆ ಬರುವುದರಿಂದ ಚಾಲಕ ಕಣ್ಣೀರು ಹಾಕುತ್ತಿರುವುದನ್ನು ಕಾಣಬಹುದು.
ನೂತನ ಸರ್ಕಾರದ ಉಚಿತ ಖಚಿತ ಭಾಗ್ಯಗಳ ಹಿನ್ನೆಲೆಯಲ್ಲಿ ನಿಸ್ಸಹಾಯಕ ಸ್ಥಿತಿಗೆ ತಲುಪಿರುವ ಸದರಿ ಆಟೋ ಚಾಲಕ ತನ್ನೆಲ್ಲಾ ಪಡಿಪಾಟಲನ್ನು ಕ್ಯಾಮರಾ ಎದುರು ಕನ್ನಡದಲ್ಲಿ ವಿವರಿಸಿದ್ದಾನೆ. ವೀಡಿಯೋ ಅಪ್ಲೋಡ್ ಆದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಇದು ತೀವ್ರ ಚರ್ಚೆಗೆ ಗುರಿಯಾಗಿದೆ. ಕೆಲವರು ಚಾಲಕನ ದುಃಸ್ಥಿತಿಗೆ ಮರುಗಿ, ಆತನಿಗೆ ಹಣ ಕೊಡಲು ಮುಂದಾಗಿದ್ದಾರೆ. ಇನ್ನು ಕೆಲವರು ಆತನಿಗೆ ಬಹಿರಂಗ ಬೆಂಬಲ ನೀಡುತ್ತಿರುವುದನ್ನು ಕಾಣಬಹುದು.
ಡ್ರೈವರ್ ತಾನು ಐದು ಗಂಟೆ ಕಾಲ ಆಟೋ ಬಾಡಿಗೆಗೆ ನಿಂತಿದ್ದರೂ, ತಾನು ಗಳಿಸಿದ ನಗಣ್ಯ ಹಣ ತೋರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಮಾಹಿತಿಯ ಪ್ರಕಾರ ಆತ ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ಆಟೋ ಓಡಿಸಿದರೂ ಕೇವಲ 40 ರೂ. ಗಳಿಸಿದ್ದಾನೆ. ಇಲ್ಲಿ, ವೀಡಿಯೊವನ್ನು ನೀವೂ ನೋಡಬಹುದು:
“ನಾನು ಇದಕ್ಕೆ ವಿಭಿನ್ನ ಪ್ರತಿಕ್ರಿಯೆ ಹೊಂದಿದ್ದೇನೆ! ಆಟೋ ಚಾಲಕರು ತಮಗಿಷ್ಟ ಬಂದಂತೆ ಶುಲ್ಕ ವಿಧಿಸುತ್ತಾರೆ. ಎಂದಿಗೂ ಮೀಟರ್ ನೋಡಿ ಓಡಿಸೋ ಮಾತೇ ಇಲ್ಲ. ಕೆಲವು ಒಳ್ಳೆಯವರೂ ಇದ್ದಾರೆ. ಯಾರು ಮೀಟರ್ ಹಾಕಿ ಆಟೋದಲ್ಲಿ ಓಡಾಡುತ್ತಾರೋ ಅವರು ಉತ್ತಮರು. ಆದರೆ ಅವರಲ್ಲಿ ಹೆಚ್ಚಿನವರು ಹಾಗೆ ಮಾಡುವುದಿಲ್ಲ ಎಂದು ಟ್ವಿಟರ್ ಬಳಕೆದಾರರು ಬೇಸರಿಂದಲೇ ಬರೆದಿದ್ದಾರೆ.
ಮತ್ತೊಬ್ಬರು ನಾನು ನನ್ನ ಮನೆಯಿಂದ 2 ಕಿಮೀ ದೂರದಲ್ಲಿರುವ ಮೆಟ್ರೋ ನಿಲ್ದಾಣಕ್ಕೆ ಹೋಗುತ್ತೇನೆ. ನಾನು ಇಳಿಯುವಾಗ, ಈ ವ್ಯಕ್ತಿಗಳು (ಆಟೋ ಚಾಲಕರು) ನನ್ನನ್ನು ಸುತ್ತುವರೆದು 150 ರೂ ಕೇಳುತ್ತಾರೆ. ಅದು ಬೇಡವೆಂದು ನಾನು ನಡೆಯಲು ನಿರ್ಧರಿಸಿದಾಗ, ಅವರು ನನ್ನನ್ನು ಕನ್ನಡದಲ್ಲಿ ಶಪಿಸುತ್ತಾರೆ. ಅದು ನನಗೆ ಅರ್ಥವಾಗುವುದಿಲ್ಲ ಎಂಬುದು ಅವರ ಭಾವನೆಯಾಗಿದೆ. ಅದಕ್ಕೆ ಅವರ ಬಗ್ಗೆ ನನಗೆ ಶೂನ್ಯ ಸಹಾನುಭೂತಿಯಿದೆ. ಅದರ ಬದಲು ಬಸ್ ಪ್ರಯಾಣವನ್ನು ನಾನು ಪ್ರೀತಿಸುತ್ತೇನೆ ಎಂದಿದ್ದಾರೆ.
“ಇತ್ತೀಚೆಗೆ ಬೆಂಗಳೂರಿನಲ್ಲಿ ಸುಮಾರು 2 ಕಿಲೋ ಮೀಟರ್ ಆಟೋ ಸಂಚಾರ ಮಾಡಬೇಕಾಗಿತ್ತು. ಆಟೋರಿಕ್ಷಾ ಚಾಲಕರು ಹಗಲು ಹೊತ್ತಿನಲ್ಲಿಯೇ 150 ರೂ ಕೇಳುತ್ತಾರೆ! ಫ್ರೀ ಬಸ್ ಶಕ್ತಿ ಯೋಜನೆ ಅವರನ್ನು ನೋಯಿಸುತ್ತಿಲ್ಲ. ಆದರೆ ಅವರ ವರ್ತನೆ, ಒಣ ಅಹಂಕಾರ ಅವರನ್ನು ಬಾಧಿಸುತ್ತಿರುವುದು! ಇನ್ನು, ನಿಮ್ಮ ಗಮ್ಯದ ಸ್ಥಳಕ್ಕೆ ಬರಲು ಅವರನ್ನು ನೀವು ಬೇಡಿಕೊಳ್ಳಬೇಕಾದ ದುರವಸ್ಥೆಯೂ ಇದೆ. ಇದು ಕರ್ನಾಟಕ ರಿಯಾಲಿಟಿ!” ಎಂದು ಇನ್ನೊಬ್ಬ ಟ್ವಿಟರ್ ಬಳಕೆದಾರರು ಉಲ್ಲೇಖಿಸಿದ್ದಾರೆ.