ಶಾಲೆ ಮುಚ್ಚುವ ಸ್ಥಿತಿಗೂ ತಲುಪಿದೆ, ಆದರೂ ಖಾಲಿ ಕೊಠಡಿಗಳ ಸರ್ಕಾರಿ ಶಾಲೆಗೆ ಇಬ್ಬರು ಶಿಕ್ಷಕರ ನೇಮಕವಾಗಿದೆ, ಅದೂ ಗಡಿ ಜಿಲ್ಲೆಯಲ್ಲಿ!

ಶಿಕ್ಷಣ ಎಲ್ಲರಿಗೂ ಸಿಗಬೇಕು ಎನ್ನುವ ದೃಷ್ಟಿಯಿಂದ ಸರ್ಕಾರ ಶಾಲೆಗಳನ್ನು ಹಳ್ಳಿಗಳಲ್ಲಿ ತೆರೆದು ಉಚಿತ ಶಿಕ್ಷಣ ನೀಡುತ್ತೆ. ಆದ್ರೆ ಅಲ್ಲಿನ ಶಿಕ್ಷಕರೇ ಶಾಲೆಯಲ್ಲಿ ಸರಿಯಾಗಿ ಪಾಠ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಶಾಲೆಯಲ್ಲಿದ್ದ ಮಕ್ಕಳನ್ನೆಲ್ಲ ಖಾಸಗಿ ಶಾಲೆಗೆ ಸೇರಿಸ್ತಾರೆ. ಇದರಿಂದ ಆ ಸರ್ಕಾರಿ ಶಾಲೆ ಮುಚ್ಚುವ ಸ್ಥಿತಿಗೂ ತಲುಪಿಬಿಡುತ್ತದೆ. ಆದರೂ ಸಹ ಅಂತಹ ಶಾಲೆಯ ಖಾಲಿ ಕೊಠಡಿಗಳಿಗೆ ಇಬ್ಬರು ಶಿಕ್ಷಕರನ್ನು ಶಿಕ್ಷಣ ಇಲಾಖೆ ನೇಮಕ ಮಾಡಿದೆ! ಹೌದು ಇದು ಗಡಿ ಜಿಲ್ಲೆ ಚಾಮರಾಜನಗರದ ಯಳಂದೂರು ತಾಲೂಕಿನ ದಾಸನಹುಂಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಥೆ.

ಈ ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಓದಲು ಅವಕಾಶವಿದೆ. ಎರಡು ವರ್ಷಗಳ ಹಿಂದೆ 35 ಕ್ಕೂ ಹೆಚ್ಚಿನ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಒಬ್ಬರೇ ಶಿಕ್ಷಕರಿದ್ದರು. ಅವರ ವರ್ಗಾವಣೆ ನಂತರ ಬಂದ ವೀರಣ್ಣ ಎನ್ನುವ ಶಿಕ್ಷಕ ಸರಿಯಾಗಿ ಪಾಠ ಮಾಡುತ್ತಿಲ್ಲವಂತೆ. ಅವರಿಗೇ ಏನೂ ಬರಲ್ಲ, ಇನ್ನು ನಮ್ಮ ಮಕ್ಕಳಿಗೆ ಹೇಗೆ ಕಲಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಇಂಗ್ಲಿಷ್ ಅವಶ್ಯಕ. ಈಗಿರುವ ಶಿಕ್ಷಕರಿಗೆ ಅದೇನೂ ಗೊತ್ತಿಲ್ಲ. ಆದ್ದರಿಂದ ಅಲ್ಪ ಸ್ವಲ್ಪ ತಿಳಿದುಕೊಂಡಿರುವ ಮಕ್ಕಳು ಇದೀಗ ಎಲ್ಲವನ್ನೂ ಮರೆಯುತ್ತಿದ್ದಾರೆ. ಇದನ್ನು ಸಂಬಂಧ ಪಟ್ಟ ಶಿಕ್ಷಣ ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಶಿಕ್ಷಕರನ್ನು ಬದಲಾವಣೆ ಮಾಡಿ ಎಂದು ಕೇಳಿಕೊಂಡರೂ ಶಿಕ್ಷಣ ಇಲಾಖೆ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದ್ದರಿಂದ ನಾವು ನಮ್ಮ ಮಕ್ಕಳನ್ನು ಬೇರೆ ಖಾಸಗಿ ಶಾಲೆಗಳಿಗೆ ಸೇರಿಸಿದ್ದೇವೆ ಎನ್ನುತ್ತಾರೆ ಪೋಷಕರು.

ವೀರಣ್ಣ ಎನ್ನುವ ಶಿಕ್ಷಕ ಈ ಶಾಲೆಗೆ ಬಂದು ಒಂದೂವರೆ ವರ್ಷ ಕಳೆದಿದೆ. ಅವತ್ತಿನಿಂದ ಇಲ್ಲಿಯವರೆಗೆ ಗ್ರಾಮಸ್ಥರು vs ಶಿಕ್ಷಕ ಎಂಬಂತಾಗಿದೆ. ಶಿಕ್ಷಕರ ವರ್ಗಾವಣೆಗೆ ಗ್ರಾಮಸ್ಥರು ಎಲ್ಲಾ ರೀತಿಯ ಪ್ರಯತ್ನಗಳನ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಈ ವರ್ಷ 13 ಮಕ್ಕಳು ಇದ್ದರು. ಇವರಲ್ಲಿ ಐವರು 5ನೇ ತರಗತಿಯನ್ನು ಪಾಸ್ ಆಗಿದ್ದು, ಉಳಿದ 8 ಮಕ್ಕಳು ಈ ಸರ್ಕಾರಿ ಶಾಲೆಯನ್ನು ತೊರೆದು ಖಾಸಗಿ ಶಾಲೆಯನ್ನು ಸೇರಿಕೊಂಡಿದ್ದಾರೆ.

ಹೀಗಾಗಿ ಇಲ್ಲಿ ಮಕ್ಕಳೇ ಇಲ್ಲದಂತ್ತಾಗಿದ್ದು ಸದ್ಯ ಶಾಲೆ ಮುಚ್ಚುವ ಸ್ಥಿತಿ ತಲುಪಿದೆ. ಆದರೆ ಮಕ್ಕಳನ್ನು ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ಸೇರ್ಪಡೆ ಮಾಡಬೇಕೆಂದರೆ ಟಿಸಿ ಅವಶ್ಯಕತೆ ಇದೆ. ಆದರೆ ಟಿಸಿ ಕೇಳಿದರೆ ಶಿಕ್ಷಕರು ಕೊಟ್ಟಿಲ್ಲ, ಆದರೂ ಸಹ ಟಿಸಿ ನಿರಾಕರಿಸಿ ಪೋಷಕರು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲು ಮಾಡಿದ್ದು, ಶಿಕ್ಷಣ ಇಲಾಖೆ ಉತ್ತಮ ಶಿಕ್ಷಕರನ್ನು ನೇಮಕ ಮಾಡಿ ನಮಗೆ ಭರವಸೆ ನೀಡಿದರೆ ಮಾತ್ರ ಈ ಶಾಲೆಗೆ ನಮ್ಮ ಮಕ್ಕಳನ್ನ ಸೇರಿಸುತ್ತೇವೆ. ಅಲ್ಲಿಯವರೆಗೆ ಯಾವ ಒಂದು ಮಕ್ಕಳು ಈ ಶಾಲೆಗೆ ದಾಖಲಾಗಲ್ಲಾ ಎನ್ನುತ್ತಿದ್ದಾರೆ ಗ್ರಾಮಸ್ಥರು.

ಇನ್ನು ಇಷ್ಟೆಲ್ಲ ಆಗಿ ಶಾಲೆಗೆ ಬೀಗ ಹಾಕಿದ್ದರೂ, ಇದೀಗ ಖಾಲಿ ಇರುವ ಕೊಠಡಿಗಳಿಗೆ ಮತ್ತೊಬ್ಬ ಶಿಕ್ಷಕರನ್ನು ಇಲಾಖೆ ನೇಮಕ ಮಾಡಿದೆ! ಸರ್ಕಾರಿ ಶಾಲೆಗೆ ಸೇರಲು ಮಕ್ಕಳನ್ನು ಸೆಳೆಯಬೇಕಾದ ಶಿಕ್ಷಕನಿಂದಲೆ ಶಾಲೆ ಮುಚ್ಚುವ ಸ್ಥಿತಿ ತಲುಪಿರುವುದು ಮಾತ್ರ ವಿಪರ್ಯಾಸ. ಇನ್ನಾದರೂ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ತಪ್ಪನ್ನ ಸರಿಪಡಿಸಬೇಕಿದೆ.