ಅವರಿಗೆಲ್ಲಾ ಮೊದಮೊದಲು ಒಂದು ಲಕ್ಷ ರೂಪಾಯಿ ಹೂಡಿಕೆಗೆ ತಿಂಗಳಾತಿಂಗಳ ಮೂರು ಸಾವಿರ ರೂಪಾಯಿ ಕೊಟ್ಟ. ಇದಾದ ಬಳಿಕ 10 ಸಾವಿರವೂ ಕೊಟ್ಟ. ಹಣ ಜಾಸ್ತಿ ಬರುವುದನ್ನ ನೋಡಿ ಆಸೆಗೆ ಬಿದ್ದ ಜನ ಲಕ್ಷ ಲಕ್ಷ ತಂದು ಅವರ ಬಳಿ ಸುರಿಯಲು ಶುರು ಮಾಡಿದರು. ಏಕ ಕಾಲಕ್ಕೆ ಒಂದು ಲಕ್ಷ ರೂಪಾಯಿಗೆಲ್ಲಾ 24 ರಿಂದ 25 ಸಾವಿರ ರೂಪಾಯಿ ಕೊಡುತ್ತಾ ಬಂದ. ಹೀಗೆ ಕೊಟ್ಟ ಒಂದೇ ವಾರದಲ್ಲಿ ಹತ್ತು ಕೋಟಿ ಹಣ ಸಂಗ್ರಹವಾಗಿಬಿಟ್ಟಿತು. ಹೀಗೆ ಬರೋಬ್ಬರಿ 30 ಕೋಟಿ ರೂಪಾಯಿ ಹಣ ಎತ್ತಿದ ಮಹಾಕಿಲಾಡಿಗಳು ನಾಪತ್ತೆಯಾಗಿಬಿಟ್ಟರು. ಈಗ ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ ಬಡ್ಡಿ ಆಸೆಗೆ ದುಡ್ಡು ತುಂಬಿದವರು! ಇಲ್ಲಿದೆ ನೋಡಿ ಮಹಾ ದೋಖಾದ ಮಹಾ ಸ್ಟೋರಿ ಈಗ 110 ಮಂದಿ ಸಂತ್ರಸ್ತರು ಅಧಿಕೃತವಾಗಿ ವಂಚಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಈ ನೂರಾ ಹತ್ತು ಮಂದಿ ಅಧಿಕೃತವಾಗಿ ಕಳೆದುಕೊಂಡಿದ್ದು ಏಳು ಕೋಟಿ ರೂಪಾಯಿ ಹಣ. ಹೀಗೆ ಇನ್ನೂ 400 ಕ್ಕೂ ಹೆಚ್ಚು ಮಂದಿ ಹಣ ಕಳೆದುಕೊಂಡಿದ್ದಾರೆ. ಇವರೆಲ್ಲಾ ಹಣಕೊಟ್ಟು ಕೈ ಸುಟ್ಟುಕೊಂಡವರು. ದಾವಣಗೆರೆ ನಗರದ ವಿಶ್ವೇಶ್ವರಯ್ಯ ಪಾರ್ಕ್ ನಲ್ಲಿ ಸೇರಿ ಮುಂದಿನ ನಿರ್ಧಾರದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.
ಇಲ್ಲಿ ಆಗಿದ್ದು ಇಷ್ಟು ಎರಡು ಲಕ್ಷ ಹಣಕ್ಕೆ ತಿಂಗಳಿಗೆ 15ರಿಂದ 20 ಸಾವಿರ ರೂಪಾಯಿ ಬಡ್ಡಿಡ ಜೊತೆಗೆ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ ಎಂಬುದನ್ನ ನಂಬಿದ್ದಾರೆ. ಜೊತೆಗೆ ಮೊದಲಷ್ಟು ದಿನ ಇವರ ಖಾತೆಗಳಿಗೆ ಹಣ ಬಂದಿದ್ದು ನಿಜ. ಇದನ್ನ ಊರ ತುಂಬೆಲ್ಲಾ ಹೇಳಿ ಇನ್ನಷ್ಟು ಜನ ಹಳ್ಳಕ್ಕೆ ಬೀಳುವಂತೆ ಮಾಡಿದ್ದಾರೆ ಇವರೆಲ್ಲಾ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ದುಪ್ಪಟ್ಟು ಹಣ ನೀಡುವುದಾಗಿ ನಂಬಿಸಿ ನೂರಾರು ಜನರಿಗೆ ಟೋಪಿ ಹಾಕಿ ಕೋಟ್ಯಾಂತರ ರೂಪಾಯಿ ಲಪಟಾಯಿಸಿರುವ ಘಟನೆ ಬೆಣ್ಣೆ ನಗರಿ ದಾವಣಗೆರೆಯಲ್ಲಿ ನಡೆದಿದೆ.
ಈ ಪೋಟೋದಲ್ಲಿರುವ ವ್ಯಕ್ತಿಗಳ ಹೆಸರು ಕಿರಣ್ ಹಾಗೂ ರಮೇಶ್ -ಇಬ್ಬರೂ ಮಹಾನ್ ಖತರ್ನಾಕ್ ವಂಚಕರು. ಇವರು ಈಶ್ವರ ಎಂಟರ್ಪ್ರೈಸಸ್ ಎನ್ನುವ ಕಂಪನಿಯನ್ನು ಮಾಡಿಕೊಂಡು, 400 ಕ್ಕೂ ಹೆಚ್ಚು ಜನರಿಂದ ಲಕ್ಷ ಲಕ್ಷ ಹಣ ಪಡೆದು ನಾಪತ್ತೆ ಆಗಿದ್ದಾರೆ. ಈಗ ಹಣ ಕಳೆದುಕೊಂಡವರು 110 ಜನ ಎಫ್ಐಆರ್ ದಾಖಲಿಸಿದ್ದಾರೆ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ.
ಇನ್ನು ಈ ವಂಚನೆಯಲ್ಲಿ ಸಿಲುಕಿಕೊಂಡವರು ಬಹುತೇಕ ಫೋಟೋಗ್ರಾಫರುಗಳು, ಕಷ್ಟಕ್ಕೆ ಆಗುತ್ತದೆ ಎಂದು ಕೂಡಿಟ್ಟ ಹಣವನ್ನು ಈಗ ವಂಚಕರ ಕೈಗೆ ಕೊಟ್ಟಿದ್ದು, ವಂಚಕರು ಸುಮಾರು 25 ರಿಂದ 30 ಕೋಟಿ ಹಣವನ್ನು ಲಪಟಾಯಿಸಿಕೊಂಡು ಹೋಗಿದ್ದಾರೆ ಎಂದು ಅರೋಪ ಮಾಡುತ್ತಿದ್ದಾರೆ ಇತ್ತೀಚಿಗೆ ರಾತ್ರಿ ರಮೇಶ ಮನೆ ಖಾಲಿ ಮಾಡುವಾಗ ವಂಚನೆಗೆ ಒಳಗಾದ ಜನರು ಮುತ್ತಿಗೆ ಹಾಕಿದ್ದು ಮನೆ ಸಾಮಾಗ್ರಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೆ ಹಣ ಪಡೆದ ವಂಚಕರು ಬಾಂಡ್ ಪೇಪರ್ ಹಾಗೂ ಚಕ್ ಗಳನ್ನು ನೀಡಿ ಜನರಲ್ಲಿ ನಂಬಿಕೆ ಗಳಿಸಿದ್ದಾರೆ. ಮಗಳ ಮದುವೆಗೆ ಎಂದು ಒಟ್ಟುಮಾಡಿಕೊಂಡಿದ್ದ 8 ಲಕ್ಷ ಹಣ ಹಾಗೂ ಮಗನ ಬಳಿ ಇದ್ದ 30 ಲಕ್ಷ ಹಣವನ್ನು ಕೂಡ ಲಪಟಾಯಿಸಿಕೊಂಡು ಹೋಗಿದ್ದಾರೆ. ನಾವು ಬೀದಿಗೆ ಬಂದಿದ್ದೇವೆ, ನಮಗೆ ವಿಷ ಕೊಡಿ ಎಂದು ಮಹಿಳೆಯೊಬ್ಬರು ಗೋಳಾಡಿದ್ದಾರೆ.
ಹಣ ದುಪ್ಪಟ್ಟು ಸಿಗುತ್ತದೆ ಎನ್ನುವ ಆಸೆಗೆ ಕೂಡಿಟ್ಟ ಹಣವನ್ನೆಲ್ಲ ವಂಚಕರಿಗೆ ಧಾರೆಯೆರೆದಿದ್ದು, ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಪೊಲೀಸರು ತನಿಖೆ ನಡೆಸಿ ವಂಚನೆ ಮಾಡಿದವರನ್ನು ಹಿಡಿದು ನೊಂದವರಿಗೆ ನ್ಯಾಯ ಕೊಡಿಸಬೇಕಿದೆ. ಪೊಲೀಸರಿಗೆ ದೂರು ನೀಡಿದ್ದಾರೆ. ಜೊತೆಗೆ ಹಿರಿಯ ಪೊಲೀಸ ಅಧಿಕಾರಿ ಗಳ ಸಹಾಯ ಕೇಳಿದ್ದಾರೆ. ಹಣ ಪಡೆದ ಕಿರಣ್-ರಮೇಶ್ ಜೋಡಿಯನ್ನ ಹುಡುಕುವಂತೆ ವಿನಂತಿಸಿದ್ದಾರೆ. ಯಾರೇ ಆಗಲಿ ಅನಾಯಾಸವಾಗಿ ಹಣ ಬರುತ್ತದೆ ಅಂತಾ ಬೇಕಾಬಿಟ್ಟಿ ಹಣ ಕೊಟ್ಟರೇ ಇದೇ ಸ್ಥಿತಿ. ಬೆವರು ಸುರಿದ ದುಡಿದ ಹಣದ ಬಗ್ಗೆ ಸ್ಪಲ್ಪವಾದರೂ ಎಚ್ಚರಿಕೆ ಇರಲಿ.