ಉಡುಪಿ: ರಾಷ್ಟ್ರಪ್ರಶಸ್ತಿ ಪುರಸ್ಕೃತ ಯಕ್ಷಗಾನ ಗುರು ಭಾಗವತ ತೋನ್ಸೆ ಜಯಂತ್‌ ಕುಮಾರ್‌ ನಿಧನ

ಉಡುಪಿ(ಜೂ.27):  ರಾಷ್ಟ್ರಪ್ರಶಸ್ತಿ ಪುರಸ್ಕೃತ, ಪ್ರಸಿದ್ಧ ಯಕ್ಷಗಾನ ಭಾಗವತ ತೋನ್ಸೆ ಜಯಂತ್‌ ಕುಮಾರ್‌(78) ಸೋಮವಾರ ಅನಾರೋಗ್ಯದಿಂದ ಉಡುಪಿಯಲ್ಲಿ ನಿಧನರಾದರು.  ಸಂಚಾರ ಯಕ್ಷಗಾನ ಭಂಡಾರ ಎಂದೇ ಪ್ರಸಿದ್ಧರಾಗಿದ್ದ ತೋನ್ಸೆ ಕಾಂತಪ್ಪ ಮಾಸ್ತರ್‌ ಅವರ ಸುಪುತ್ರ ಜಯಂತ್‌ ಕುಮಾರ್‌, ಯಕ್ಷಗಾನ ಶಿಕ್ಷಣವನ್ನು ತಂದೆಯವರಿಂದಲೇ ಪಡೆದುಕೊಂಡಿದ್ದರು. 

ಆರಂಭದಲ್ಲಿ ಯಕ್ಷಗಾನ ವೇಷಧಾರಿಯಾಗಿ ರಂಗಪ್ರವೇಶಿಸಿ ಚಂಡೆ ಮದ್ದಳೆಗಳಲ್ಲಿ ಪರಿಣಿತರಾಗಿದ್ದರು. ನಂತರ ಭಾಗವತಿಕೆಯನ್ನೇ ತಮ್ಮ ಸಾಧನೆಯ ಕ್ಷೇತ್ರವನ್ನಾಗಿ ಮಾಡಿಕೊಂಡವರು. ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಶ್ರೀರಾಮ ವಿಠಲ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ ಸೇರಿ ನೂರಾರು ಪ್ರಶಸ್ತಿಗೆ ಭಾಜನರಾಗಿದ್ದರು. ರಾಷ್ಟ್ರಪತಿ ಶಂಕರ್‌ ದಯಾಳ್‌ ಶರ್ಮಾರಿಂದ ರಾಷ್ಟ್ರೀಯ ಪ್ರಶಸ್ತಿಯನ್ನೂ ಜಯಂತ್‌ ಕುಮಾರ್‌ ಸ್ವೀಕರಿಸಿದ್ದರು. ಮೃತರು ಮೂವರು ಮಕ್ಕಳು, ಪತ್ನಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸೋಮವಾರ ನಡೆಯಿತು.