ರಾಜ್ಯಕ್ಕೆ ಮಳೆ ಕೊರತೆ, ಬರಗಾಲದ ಭೀತಿ ಎದುರಾಗುವ ಸಾಧ್ಯತೆ

ಬೆಂಗಳೂರು: ಕರ್ನಾಟಕಕ್ಕೆ  ಮುಂಗಾರು  ತಡವಾಗಿ ಪ್ರವೇಶಿಸಿದೆ. ಆದರೂ ಕೂಡ ಅಂದುಕೊಂಡಷ್ಟು ಮಳೆಯಾಗುತ್ತಿಲ್ಲ. ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದರೂ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ವಾಡಿಕೆಯಷ್ಟೂ ಕೂಡ ಮಳೆಯಾಗುತ್ತಿಲ್ಲ. ಇದರಿಂದ ಜುಲೈ ಮೊದಲ ವಾರ ರಾಜ್ಯದ ಕೆಲ ಪ್ರದೇಶಗಳಿಗೆ ಬರಗಾಲ ಆವರಿಸುವ ಸಾಧ್ಯೆತೆ ಇದೆ ಎಂದು ಸರ್ಕಾರಿ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಅಸಮರ್ಪಕ ಪ್ರಮಾಣದ ಮಳೆಯಿಂದ ಜುಲೈ ಮೊದಲ ವಾರದ ವೇಳೆಗೆ ರಾಜ್ಯದ ಬಹುತೇಕ ಭಾಗಗಳಿಗೆ ಬರದ ಕರಿ ಛಾಯೆ ಆವರಿಸಲಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.

ಬೆಂಗಳೂರಿನ ಕುಡಿಯುವ ನೀರಿನ ಮೂಲವಾದ ಕೃಷ್ಣರಾಜಸಾಗರ (ಕೆಆರ್‌ಎಸ್) ಅಣೆಕಟ್ಟಿನಲ್ಲಿ ಪ್ರಸ್ತುತ 78 ಟಿಎಂಸಿ ಮಾತ್ರ ನೀರಿದೆ. ಇದರ ಗರಿಷ್ಠ ಸಾಮರ್ಥ್ಯ 124.8 ಟಿಎಂಸಿ. ತುಲನಾತ್ಮಕವಾಗಿ, ಕಳೆದ ವರ್ಷ ಈ ಸಮಯದಲ್ಲಿ, ನೀರಿನ ಮಟ್ಟ 106.5 ಟಿಎಂಸಿ ಇತ್ತು. ಜಲಸಂಪನ್ಮೂಲ ಇಲಾಖೆ ಈಗಾಗಲೇ ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿದ್ದು, ಸಂಗ್ರಹಣೆ 74 ಟಿಎಂಸಿಗಿಂತ ಕಡಿಮೆಯಾದರೆ ಕುಡಿಯುವ ನೀರಿಗೆ ಮಾತ್ರ ಮೀಸಲಿಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅದೇ ರೀತಿ ಕಲ್ಯಾಣ ಕರ್ನಾಟಕ ಭಾಗಕ್ಕೆ ನೀರುಣಿಸುವ ತುಂಗಭದ್ರಾ ಅಣೆಕಟ್ಟಿನಲ್ಲಿ ಪ್ರಸ್ತುತ 4.1 ಟಿಎಂಸಿ ನೀರು ಮಾತ್ರ ಇದ್ದು, ಕಳೆದ ವರ್ಷದ 43.9 ಟಿಎಂಸಿಗೆ ಹೋಲಿಸಿದರೆ ಗಣನೀಯ ಇಳಿಕೆಯಾಗಿದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ ಕರ್ನಾಟಕದ ಕಾವೇರಿ ಮತ್ತು ತುಂಗಭದ್ರಾ ನದಿ ಪಾತ್ರ ಪ್ರದೇಶಗಳಲ್ಲಿ ಮಳೆಗಾಲ ಆರಂಭವಾದ ಮೊದಲ 25 ದಿನಗಳಲ್ಲಿ ಸಾಮಾನ್ಯ ಮಳೆಗಿಂತ ಮೂರನೇ ಒಂದು ಭಾಗಕ್ಕಿಂತ ಕಡಿಮೆ ಮಳೆಯಾಗಿದೆ.

ಬಿಪರ್‌ಜೋಯ್ ಚಂಡಮಾರುತದಿಂದ ನಿಧಾನವಾದ ಗಾಳಿಯಿಂದ ನೈಋತ್ಯ ಮಾನ್ಸೂನ್ ವಿಳಂಬವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಮುಂಗಾರು ಪ್ರಾರಂಭಗೊಂಡಿದ್ದರೂ ಸಹ, ಕರ್ನಾಟಕದ ಹಲವಾರು ಪ್ರದೇಶಗಳಿಗೆ ಮಳೆಯಾಗಿಲ್ಲ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಮಾನ್ಸೂನ್ ನಿಧಾನಗತಿಯ ಪ್ರಗತಿಯಲ್ಲಿದೆ.

ರಾಜ್ಯಾ ಮಾನ್ಸೂನ್ ವ್ಯಾಪ್ತಿಗೆ ಒಳಪಟ್ಟಿದ್ದರೂ, ಕರ್ನಾಟಕದಲ್ಲಿ ಇನ್ನೂ ವಾಡಿಕೆ ಪ್ರಮಾಣದ ಮಳೆಯಾಗಿಲ್ಲ. ಕರಾವಳಿ ಕರ್ನಾಟಕವನ್ನು ಹೊರತುಪಡಿಸಿ, ರಾಜ್ಯದ ಇತರ ಎಲ್ಲ ಪ್ರದೇಶಗಳು ಮಳೆಯ ಕೊರತೆಗೆ ಸಾಕ್ಷಿಯಾಗಿವೆ. ಕರ್ನಾಟಕದಲ್ಲಿ ಈ ಬಾರಿ ಶೇ 64ರಷ್ಟು ಮಳೆ ಕೊರತೆಯಾಗಿದೆ. ಮುಂದಿನ ದಿನಗಳಲ್ಲಿ ಇದು ಸುಧಾರಿಸುತ್ತದೆ ಎಂದು ನಾವು ಭರವಸೆ ಹೊಂದಿದ್ದೇವೆ ಎಂದು ಐಎಂಡಿ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.