ವಾಷಿಂಗ್ಟನ್: ದಕ್ಷಿಣ ಏಷ್ಯಾ ಹಾಗೂ ಇಂಡೋ-ಕೆರಿಬಿಯನ್ ಸಮುದಾಯಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಅಮೆರಿಕದ ದೊಡ್ಡ ನಗರವಾದ ನ್ಯೂಯಾರ್ಕ್‌ನಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಹಿಂದೂ, ಸಿಖ್, ಜೈನರು ಹಾಗೂ ಬೌದ್ಧರು ಆಚರಿಸೋ ಈ ದೀಪಾವಳಿ ಹಬ್ಬವನ್ನು ನ್ಯೂಯಾರ್ಕ್‌ನ ಸುಮಾರು 2 ಲಕ್ಷ ನಗರವಾಸಿಗಳು ಆಚರಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಗುರುತಿಸಿಕೊಂಡು ನ್ಯೂಯಾರ್ಕ್ ನಗರದಲ್ಲಿ ಶಾಲಾ ರಜಾ ದಿನಗಳ ಪಟ್ಟಿಗೆ ದೀಪಾವಳಿ ಹಬ್ಬವನ್ನು ಸೇರಿಸಲಾಗಿದೆ ಎಂದು ಮೇಯರ್ ಎರಿಕ್ ಆಡಮ್ಸ್ ಸೋಮವಾರ ತಿಳಿಸಿದ್ದಾರೆ.
ಹೆಚ್ಚಾಗಿ ದೀಪಾವಳಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಬರುತ್ತದೆ. ಈ ವರ್ಷ ದೀಪಾವಳಿ ಹಬ್ಬ ನವೆಂಬರ್ 12 ರಂದು ಇದ್ದು ಆ ದಿನ ಭಾನುವಾರದ ರಜೆ ಇದೆ. ಹೀಗಾಗಿ ಇದರ ಲಾಭ 2024ರ ದೀಪಾವಳಿಗೆ ಅಲ್ಲಿನ ಜನರಿಗೆ ಲಭಿಸಲಿದೆ.
2021ರಲ್ಲಿ ಮೇಯರ್ ಹುದ್ದೆಗೆ ಸ್ಪರ್ಧಿಸಿದಾಗ ಆಡಮ್ಸ್ ದೀಪಾವಳಿಯನ್ನು ಶಾಲಾ ರಜೆಯನ್ನಾಗಿ ಮಾಡುವ ಭರವಸೆ ನೀಡಿದ್ದರು. ನ್ಯೂಯಾರ್ಕ್ ನಗರದ ಶಾಸಕಾಂಗ ನಗರದಲ್ಲಿ ದೀಪಾವಳಿಯನ್ನು ಸಾರ್ವಜನಿಕ ಶಾಲಾ ರಜೆಯನ್ನಾಗಿ ಮಾಡುವ ಮಸೂದೆಗೆ ಸಹಿ ಹಾಕಿದರೆ ಇದು ಅಧಿಕೃತವಾಗಲಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಆಡಮ್ಸ್, ಇದು ನಿರಂತರವಾಗಿ ಬದಲಾಗುತ್ತಿರುವ ನಗರವಾಗಿದ್ದು, ಪ್ರಪಂಚದಾದ್ಯಂತ ಎಲ್ಲಾ ಸಮುದಾಯಗಳನ್ನು ನಿರಂತರವಾಗಿ ಸ್ವಾಗತಿಸುತ್ತಿದೆ ಎಂದಿದ್ದಾರೆ.