ಉದ್ಘಾಟನೆಗೂ ಮುನ್ನವೇ ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿನ ಬಹುತೇಕ ಎಲ್ಲಾ ಸೀಟ್​ ಬುಕ್

ಧಾರವಾಡ: ಇಂದು (ಜೂ.28) ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್​​ಪ್ರೆಸ್​ಗೆ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರದೇಶದ ಭೋಪಾಲ್​​ನ ರಾಣಿ ಕಮಲಾಪತಿ ರೈಲ್ವೆ ನಿಲ್ದಾಣದಿಂದ ಬೆಳಿಗ್ಗೆ 10:30 ವರ್ಚುವಲ್​ ಮೂಲಕ ಚಾಲನೆ ನೀಡಲಿದ್ದಾರೆ. ಚಾಲನೆ ಬಳಿಕ ಧಾರವಾಡ ರೈಲ್ವೆ ನಿಲ್ದಾಣದಲ್ಲಿ ಸಾಂಕೇತಿಕ ಕಾರ್ಯಕ್ರಮ ನಡೆಯುತ್ತದೆ. ನಂತರ ಧಾರವಾಡದಿಂದ ಬೆಂಗಳೂರಿಗೆ ಹೊರಡುತ್ತದೆ. ಇದು ರಾಜ್ಯದೊಳಗೆ ಸಂಚರಿಸಲಿರುವ ಮೊದಲ ರೈಲಾಗಿದೆ. ಈ ರೈಲು ಸೇರಿದಂತೆ ಪ್ರಧಾನಿ ಮೋದಿಯವರು ಏಕಕಾಲಕ್ಕೆ ಐದು ವಂದೇ ಭಾರತ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.

ಜೂ.28 ರ ಪ್ರಯಾಣಕ್ಕೆ ಬಹುತೇಕ ಸೀಟ್​ ಬುಕ್​​

ಜೂನ್.28ರ ಪ್ರಯಾಣಕ್ಕೆ ಸೀಟ್​​ ಬುಕ್ಕಿಂಗ್​ ಆರಂಭವಾಗಿದೆ. ಬುಕ್ಕಿಂಗ್​​ ಆರಂಭವಾದ ಕೆಲವೇ ನಿಮಿಷಗಳಲ್ಲಿ ಬಹುತೇಕ ಸೀಟ್​​​​ಗಳು ಬುಕ್​ ಆಗಿವೆ. ಜೂನ್ 28 ರಂದು ಬೆಂಗಳೂರಿನಿಂದ ಧಾರವಾಡಕ್ಕೆ ಹೊರಡುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸೀಟ್​​​ ಬುಕ್ಕಿಂಗ್​ ಬೆಳಿಗ್ಗೆ 8 ಗಂಟೆಗೆ ಆರಂಭವಾಯಿತು. ಮೊದಲ 20 ನಿಮಿಷಗಳಲ್ಲೇ ಶೇ 85 ರಷ್ಟು ಸೀಟುಗಳು ಬುಕ್​ ಆಗಿವೆ. ಹಾಗೇ ಧಾರವಾಡದಿಂದ ಬೆಂಗಳೂರಿಗೆ ಹೊರಡುವ ವಂದೇ ಭಾರತ್ ರೈಲಿನ ಸೀಟ್​ಗಳು ಕೂಡ​​ ಬುಕ್ಕಿಂಗ್ ​ಆರಂಭವಾದ ಮೊದಲ 20 ನಿಮಿಷಗಳಲ್ಲೇ ಬಹುತೇಕ ಫುಲ್​ ಆಗಿವೆ.

ಈ ರೈಲು 8 ಬೋಗಿಗಳನ್ನು ಹೊಂದಿದ್ದು, 530 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಈ ರೈಲು ವಾರದಲ್ಲಿ 6 ದಿನ ಧಾರವಾಡ-ಬೆಂಗಳೂರು ಮಾರ್ಗದಲ್ಲಿ ಸಂಚಾರ ಮಾಡುತ್ತದೆ.