ರಾಜ್ಯ ಸರ್ಕಾರಕ್ಕೆ ಮತ್ತೊಂದು ಶಾಕ್, ನೀಡಿದ್ದ ಭರವಸೆ ಈಡೇರಿಸುವಂತೆ ಸಿಡಿದೆದ್ದ ಅಂಗನವಾಡಿ ಕಾರ್ಯಕರ್ತೆಯರು

ಬೆಂಗಳೂರು: ರಾಜ್ಯ ಸರ್ಕಾರ ಅನ್ನಭಾಗ್ಯ ಜಾರಿಗೆ ಇನ್ನಿಲ್ಲದ ಸರ್ಕಸ್ ನಡೆಸುತ್ತಿದೆ. ಕೇಂದ್ರದೊಂದಿಗೆ ಮಾತುಕಥೆ ಮುರಿದು ಬಿದ್ದಿದ್ದು, ಹೆಚ್ಚುವರಿ ಅಕ್ಕಿ ಕೊಡಲು ಕೇಂದ್ರ ನಿರಾಕರಿಸಿದೆ. ಹೀಗಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಪ್ರಯತ್ನ ಮುಂದುವರಿಸಿದೆ. ಇನ್ನೊಂದೆಡೆ ಗೃಹಲಕ್ಷ್ಮೀ ಅರ್ಜಿ ಸಲ್ಲಿಕೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದರೊಂದಿಗೆ ಚುನಾವಣೆಯಲ್ಲಿ ಕೊಟ್ಟ ಐದು ಗ್ಯಾರಂಟಿಗಳ ಜಾರಿಗೆಗೆ ಮುಂದಾಗಿದೆ. ಇನ್ನು ಈ ಯೋಜನೆಗಳಿಗೆ ಹಣ ಕ್ರೋಢೀಕರಣಕ್ಕೆ ಇನ್ನಿಲ್ಲದ ಕಸರತ್ತು ನಡೆಸಿದೆ. ಇದರ ಮಧ್ಯೆ ಇದೀಗ ಅಂಗನವಾಡಿ ಕಾರ್ಯಕರ್ತೆಯರು ಸಿಡಿದೆದ್ದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ತಮಗೆ ನೀಡಿದ್ದ ಭರವಸೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರಿಗೆ 15,000 ರೂ. ಸಹಾಯಕಿಯರಿಗೆ 10,000 ಸಾವಿರ ‌ರುಪಾಯಿ ವೇತನ ನೀಡಲಾಗುವುದು ಎಂದು ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಣೆ ಮಾಡಿತ್ತು. ಇದೀಗ ಅದನ್ನು ಜಾರಿ ಮಾಡುವಂತೆ ಕರ್ನಾಟಕ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ‌ ಫೆಡರೇಶನ್ ಇಂದು (ಜೂನ್ 27) ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲಿದ್ದಾರೆ.

ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಅಂಗನವಾಡಿ ಕಾರ್ಯಕರ್ತೆಯರಿಗೆ 15,000 ರೂ. ಹಾಗೂ ಸಹಾಯಕಿಯರಿಗೆ 10,000 ಸಾವಿರ ‌ರುಪಾಯಿ ನೀಡುತ್ತೇವೆ ಎಂದು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬೆಳಗಾವಿಯ ಖಾನಾಪುರದ ಕಾಂಗ್ರೆಸ್ ‌ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ‌ಘೋಷಣೆ ಮಾಡಿದ್ದರು. ಇದನ್ನು ನಂಬಿ ರಾಜ್ಯದ 1 ಲಕ್ಷದ 35 ಸಾವಿರ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮತ ಚಲಾಯಿಸಿದ್ದೇವೆ. ಆದರೆ ನೂತನ ಕಾಂಗ್ರೆಸ್ ಸರ್ಕಾರ ನಮಗೆ ನೀಡಿದ ಭರವಸೆ ಈಡೇರಿಸಿಲ್ಲ. ಕೇವಲ ಐದು ಗ್ಯಾರೆಂಟಿ ಗಳ ಬಗ್ಗೆ ಮಾತ್ರ ಸರ್ಕಾರ ‌ಮಾತನಾಡುತ್ತಿದೆ. ಆರನೇ ಗ್ಯಾರೆಂಟಿ ಬಗ್ಗೆ ಮಾತಾಡುತ್ತಿಲ್ಲ. ಕೂಡಲೇ ರಾಜ್ಯ ಸರ್ಕಾರ ನಮಗೆ ಕೊಟ್ಟ ಭರವಸೆಗಳ ಬಗ್ಗೆ ಗಮನಹರಿಸಬೇಕು ಎಂದು ಕರ್ನಾಟಕ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ‌ ಫೆಡರೇಶನ್ ಮನವಿ ಮಾಡಿದೆ. ಸದ್ಯ ಅಂಗನವಾಡಿ ಕಾರ್ಯಕರ್ತೆಗೆ 11,500 ರುಪಾಯಿ ಮತ್ತು ಸಹಾಯಕಿಯರಿಗೆ 7500 ರುಪಾಯಿ ವೇತನ ನೀಡಲಾಗುತ್ತಿದೆ.

ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಇತರೆ ಬೇಡಿಕೆಗಳು

  1. ಬೇರೆ ಇಲಾಖೆಯ (ಆರೋಗ್ಯ ಇಲಾಖೆ ಸಮೀಕ್ಷೆಯೂ ಸೇರಿದಂತೆ) ಕೆಲಸಗಳಿಗೆ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳಬಾರದು.
  2. ಕಳಪೆ ಗುಣಮಟ್ಟದ ಮತ್ತು ಹಾಳಾಗಿರುವ ಮೊಬೈಲ್‌ಗಳನ್ನು ಜುಲೈ ತಿಂಗಳ ಮೊದಲನೆ ವಾರದಲ್ಲಿ ಇಲಾಖೆಗೆ ಹಿಂದಿರುಗಿಸಲು ನಿರ್ಧರಿಸಿದ್ದು ಕೂಡಲೆ ಇಲಾಖೆ ಮೊಬೈಲ್‌ಗಳನ್ನು ವಾಪಸ್ ಪಡೆದು ಹೊಸ ಮೊಬೈಲ್ ಅಥವಾ ಮಿನಿ ಟ್ಯಾಬ್‌ಗಳನ್ನು ನೀಡಬೇಕು. ಈಗಾಗಲೇ ಮೊಬೈಲ್‌ಗಳು ಹಾಳಾಗಿರುವುದರಿಂದ ಪೋಷಣ್, ಟಾಕ್‌ನಲ್ಲಿ ಮನೆ ಭೇಟಿ, ತೂಕದ ಮಾಹಿತಿ, ಹೊಸ ಮಕ್ಕಳ ಸೇರ್ಪಡೆ ಎಲ್ಲಾ ದಾಖಲೆಯನ್ನು ಮೊಬೈಲ್‌ನಲ್ಲಿ ನಿರ್ವಹಿಸಲು ಕಷ್ಟಸಾಧ್ಯವಾಗಿದ್ದು, ಪುಸ್ತಕದಲ್ಲಿ ದಾಖಲಿಸುತ್ತಿದ್ದು, ಮೊಬೈಲ್‌ನಲ್ಲಿ ಅಪ್‌ಲೋಡ್ ಮಾಡಲು ಸಾಧ್ಯವಾಗದೆ ಇರುವುದರಿಂದ ಹೊಸ ಮೊಬೈಲ್‌ಗಳನ್ನು ನೀಡುವವರೆಗೂ ಮೊಬೈಲ್ ಅಪ್‌ಲೋಡ್ ಮಾಡಲೇಬೇಕೆಂದು ಅಧಿಕಾರಿಗಳು ಒತ್ತಡ ಹೇರುವುದನ್ನು ಕೈ ಬೀಡಬೇಕು.
  3.  ಅಂಗನವಾಡಿಗಳಿಗೆ ಸರಬರಾಜು ಮಾಡುತ್ತಿರುವ ಮೊಟ್ಟೆ ಟೆಂಡರ್ ನ ಪರಿಣಾಮ ಮೊಟ್ಟೆಗಳು ಕಳಪೆ ಮತ್ತು ಕಡಿಮೆ ಗಾತ್ರದಿಂದ ಕೂಡಿದ್ದು, ಇದು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳುತ್ತಿರುವುದರಿಂದ ಹಾಗೂ ಸರಿಯಾದ ಸಮಯಕ್ಕೆ ಸರಬರಾಜು ಮಾಡದೆ ಇರುವುದರಿಂದ ಟೆಂಡರ್ ಪದ್ಧತಿಯನ್ನು ಕೈಬಿಟ್ಟು ಮೊಟ್ಟೆ ಖರೀದಿಯ ಜವಾಬ್ದಾರಿಯನ್ನು ಬಾಲ ವಿಕಾಸ ಸಮಿತಿಗೆ ವಹಿಸಬೇಕು.
  4.  ಬಹುತೇಕ ಜಿಲ್ಲೆಗಳಲ್ಲಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳ ಬಾಕಿ ಉಳಿದಿರುವ 6 ತಿಂಗಳ ಬಾಡಿಗೆ ಹಣ (ಬೀದರ್ ಜಿಲ್ಲೆಯಲ್ಲಿ ಒಂದುವರೆ ವರ್ಷದ ಬಾಕಿ ಇರುವ ಬಾಡಿಗೆ ಹಣ) ಕೂಡಲೆ ಬಿಡುಗಡೆಗೊಳಿಸುವುದು.
  5.  ಅಂಗನವಾಡಿ ಕೇಂದ್ರಗಳಿಗೆ ಸ್ವಚ್ಛಗೊಳಿಸುವ ವಸ್ತುಗಳ ಖರೀದಿಗೆ ಸಾಧಿಲ್ವಾರು, ಪಕ್ಷಿ, ಇಸಿಸಿ ಹಣ ಒಂದು ವರ್ಷದಿಂದ ಬಿಡುಗಡೆಯಾಗಿರುವುದಿಲ್ಲ. ಅದನ್ನು ಕೂಡಲೇ ಬಿಡುಗಡೆ ಮಾಡಬೇಕು. ಹಾಗೂ ಗ್ಯಾಸ್ ಬಿಲ್ ಮತ್ತು ವಿದ್ಯುತ್ ಬಿಲ್ ಪಾವತಿಸಬೇಕು.
  6.  ದೀರ್ಘ ಕಾಲ ಒಂದೆ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು, ಮೇಲ್ವಿಚಾರಕಿಯರು ಸೇರಿದಂತೆ ಎಲ್ಲಾ ಸಿಬ್ಬಂದಿಗಳನ್ನು ವರ್ಗಾವಣೆಗೊಳಿಸಬೇಕು. ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸಿ.ಡಿ.ಪಿ.ಒ, ಮೇಲ್ವಿಚಾರಕಿಯರು ಸೇರಿದಂತೆ ಖಾಲಿ ಇರುವ ಇಲ್ಲಾ ಹುದ್ದೆಗಳನ್ನು ಭರ್ತಿ ಮಾಡಬೇಕು.
  7. ನಿವೃತ್ತರಿಗೆ 3 ಲಕ್ಷ ರೂಪಾಯಿ ಹಿಡಿಗಂಟು ಜಾರಿಗೊಳಿಸಬೇಕು. ಮಾಸಿಕ 5 ಸಾವಿರ ಪೆನ್ಷನ್ ನೀಡಬೇಕು