ನವದೆಹಲಿ (ಜೂ.23): ವೈಟ್‌ಹೌಸ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ ನೀಡುವ ವೇಳೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಮುಜುಗರದ ಸನ್ನುವೇಶ ಸೃಷ್ಟಿಸಿದ್ದಾರೆ. ಶ್ವೇತಭವನಕ್ಕೆ ಮೋದಿ ಆಗಮಿಸಿದ ವೇಳೆ ಉಭಯ ದೇಶಗಳ ನಾಯಕರು ಎರಡೂ ದೇಶಗಳ ರಾಷ್ಟ್ರಗೀತೆಗಾಗಿ ನಿಂತಿದ್ದರು. ಈ ಹಂತದಲ್ಲಿ ಮೊದಲಿಗೆ ಭಾರತದ ರಾಷ್ಟ್ರಗೀತೆಯನ್ನು ನುಡಿಸಲಾಗಿತ್ತು. ಈ ವೇಳೆ ಇದನ್ನು ಅಮೆರಿಕದ ರಾಷ್ಟ್ರಗೀತೆ ಎಂದು ಭಾವಿಸಿದ ಅಧ್ಯಕ್ಷ ಜೋ ಬೈಡೆನ್ ತಮ್ಮ ಕೈಯನ್ನು ಎದೆಯ ಮೇಲೆ ಇರಿಸಿದ್ದರು. ಕೆಲ ಹೊತ್ತಿನ ಬಳಿಕ ಇದು ಅಮೆರಿಕದ್ದಲ್ಲ, ಭಾರತದ ರಾಷ್ಟ್ರಗೀತೆ ಎನ್ನುವ ಅರಿವಿಗೆ ಬಂದಿದೆ. ಈ ಹಂತದಲ್ಲಿ ಅವರು ನಿಧಾನವಾಗಿ ಕೈಗಳನ್ನು ಎದೆಯ ಮೇಲಿಂದ ಕೆಳಗಿಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ. 80 ವರ್ಷದ ಜೋ ಬೈಡೆನ್, ಶ್ವೇತಭವನದಲ್ಲಿ ಪ್ರಧಾನಿ ಮೋದಿಗೆ ಕೆಂಪು ಹಾಸಿನ ಸ್ವಾಗತ ನೀಡಿದ್ದರು. ರಷ್ಯಾ ಹಾಗೂ ಚೀನಾ ನಡುವಿನ ಅಮೆರಿಕದ ಸಂಬಂಧ ಹಳಸುತ್ತಿರುವ ನಡುವೆ ನವದೆಹಲಿ ಹಾಗೂ ವಾಷಿಂಗ್ಟನ್ ನಡುವಿನ ಸಂಬಂಧ ಗಟ್ಟಿ ಮಾಡುವ ಪ್ರಯತ್ನದಲ್ಲಿ ಬೈಡೆನ್, ಪ್ರಧಾನಿ ಮೋದಿಗೆ ಸ್ವಾಗತ ಕಾರ್ಯಕ್ರಮ ಏರ್ಪಡಿಸಿದ್ದರು.
ಇದರೊಂದಿಗೆ 7 ಸಾವಿರಕ್ಕಿಂತ ಅಧಿಕ ಅತಿಥಿಗಳು ವೈಟ್‌ಹೌಸ್‌ನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಯುನೈಟೆಡ್ ಸ್ಟೇಟ್ಸ್ ಆರ್ಮಿ ಓಲ್ಡ್ ಗಾರ್ಡ್ ಫೈಫ್ ಮತ್ತು ಡ್ರಮ್ ಕಾರ್ಪ್ಸ್ ಹಾಗೂ ಮಲ್ಟಿ ಗನ್ ಸೆಲ್ಯೂಟ್‌ಅನ್ನು ಮೋದಿ ಅವರುಗೆ ನೀಡಲಾಯತು. ಈ ಹಂತದಲ್ಲಿ ಉಭಯ ನಾಯಕರು ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದರು.
ಈ ವೇಳೆ ಯುನೈಟೆಡ್ ಸ್ಟೇಟ್ಸ್ ಆರ್ಮಿ ಓಲ್ಡ್ ಗಾರ್ಡ್ ಫೈಫ್ ಮತ್ತು ಡ್ರಮ್ ಕಾರ್ಪ್ಸ್, ಮೊದಲಿಗೆ ಭಾರತದ ರಾಷ್ಟ್ರಗೀತೆಯಾದ ಜನ ಗಣ ಮನವನ್ನು ನುಡಿಸಿದರು. ಈ ಹಂತದಲ್ಲಿ ಬೈಡನ್ ಎದೆಯ ಎಡಭಾಗಕ್ಕೆ ಕೈಗಳನ್ನು ಇಟ್ಟು ಪ್ಲೆಡ್ಜ್ ಮಾಡಲು ಆರಂಭಿಸಿದ್ದರು. ಅಂದಾಜು 15 ಸೆಕೆಂಡ್‌ಗಳ ಬಳಿಕ ಇದು ಅಮೆರಿಕದ ರಾಷ್ಟ್ರಗೀತೆಯಲ್ಲ ಎನ್ನುವುದು ಅರಿವಿಗೆ ಬಂದಿದೆ. ಅಮೆರಿಕದ ರಾಷ್ಟ್ರಗೀತೆಯಾದ ‘ದಿ ಸ್ಟಾರ್ ಸ್ಪ್ಯಾಂಗಲ್ಡ್ ಬ್ಯಾನರ್’ ಇವರು ನುಡಿಸುತ್ತಿಲ್ಲ ಎನ್ನುವುದು ಅರಿವಿಗೆ ಬಂದಾಗ ನಿಧಾನವಾಗಿ ಕೈಗಳನ್ನು ಕೆಳಗೆ ಇಳಿಸುತ್ತಿರುವುದು ಕಂಡಿದೆ.