ಮಂಗಳೂರು: ನಾಗರಹಾವು ನುಂಗಿದ ಪ್ಲಾಸ್ಟಿಕ್ ಡಬ್ಬಿಯನ್ನು ಶಸ್ತ್ರಚಿಕಿತ್ಸೆ ಮೂಲಕ ಪಶುವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಲಿಟಲ್ ಪಾವ್ಸ್‌ನ ಡಾ.ಯಶಸ್ವಿ ನಾರಾವಿ ನೇತೃತ್ವದ ಪಶುವೈದ್ಯರ ತಂಡದಿಂದ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದೆ.
ಬಂಟ್ವಾಳದ ಹಾವು ರಕ್ಷಕ ಸ್ನೇಕ್ ಕಿರಣ್ ಅವರು ಬಿಲದಲ್ಲಿ ನಾಗರಹಾವೊಂದನ್ನು ನೋಡಿದ್ದಾರೆ. ಎರಡು ದಿನಗಳಾದರೂ ಸ್ಥಳದಿಂದ ಕದಲದ ಕಾರಣ ಗಾಯಗೊಂಡಿದೆ ಎಂದು ಶಂಕಿಸಿದ ಕಿರಣ್, ಹಾವನ್ನು ಸೆರೆಹಿಡಿದಿದ್ದಾರೆ. ಸುಮಾರು 10 ವರ್ಷ ವಯಸ್ಸಿನ ಈ ನಾಗರಹಾವಿನ ದೇಹದ ಮೇಲೆ ಎರಡು ದೊಡ್ಡ ಗಾಯಗಳಿರುವುದನ್ನು ಗಮನಿಸಿ ಚಿಕಿತ್ಸೆಗಾಗಿ ಚಿಕಿತ್ಸಾಲಯಕ್ಕೆ ಕೊಂಡೊಯ್ದಿದ್ದರು.
ಪರೀಕ್ಷೆ ವೇಳೆ ಹಾವಿನ ಹೊಟ್ಟೆಯಲ್ಲಿ ವಸ್ತುವೊಂದು ಇರುವುದು ತಿಳಿದುಬಂದಿದೆ. ಹೀಗಾಗಿ ಶಸ್ತ್ರಚಿಕಿತ್ಸೆಗೆ ಸಿದ್ಧತೆಗಳನ್ನು ಮಾಡಲಾಯಿತು. ನಂತರ ಹಾವಿಗೆ ಅರಿವಳಿಕೆ ಮದ್ದು ನೀಡಿ ಜೂನ್ 4 ರಂದು ಶಸ್ತ್ರಚಿಕಿತ್ಸೆ ನಡೆಸಿ ಪ್ಲಾಸ್ಟಿಕ್ ಡಬ್ಬಿಯನ್ನು ಹೊರತೆಗೆಯಲಾಯಿತು.
ಹಾವಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಡಬ್ಬಿಯನ್ನು (ವೀಳ್ಯದೆಲೆ ಅಗಿಯುವವರು ಸುಣ್ಣದ ಪುಡಿ ಇಡಲು ಬಳಸುವಂತಹ ಸಣ್ಣ ಪೆಟ್ಟಿಗೆ) ಕಂಡು ಆಶ್ಚರ್ಯವಾಯಿತು ಎಂದು ಡಾ.ಯಶಸ್ವಿ ನಾರಾವಿ ಹೇಳಿದ್ದಾರೆ. ಅರಿವಿಲ್ಲದೆ ಸೇವಿಸಿದ ಹಾವು ಅನಾರೋಗ್ಯಕ್ಕೆ ಒಳಗಾಗಿ ಬಿಲದಲ್ಲಿ ಉಳಿದುಕೊಂಡಿತು. ಶಸ್ತ್ರಚಿಕಿತ್ಸೆ ನಂತರ 15 ದಿನಗಳ ಕಾಲ ಆರೈಕೆಯಲ್ಲಿತ್ತು. ಈ ಅವಧಿಯಲ್ಲಿ, ಹಾವಿನ ಸಂಪೂರ್ಣ ಆರೈಕೆ ನಡೆಸಲಾಯಿತು. ಸದ್ಯ ಹಾವನ್ನು ರಕ್ಷಿಸಿದ ಅದೇ ಸ್ಥಳಕ್ಕೆ ಮತ್ತೆ ಬಿಡಲಾಯಿತು ಎಂದರು.
“ಪ್ಲ್ಯಾಸ್ಟಿಕ್‌ನಿಂದ ಸಾಕು ಮತ್ತು ಸಮುದ್ರ ಪ್ರಾಣಿಗಳಿಗೆ ಹಾನಿಯುಂಟಾದ ಹಲವಾರು ನಿದರ್ಶನಗಳಿವೆ. ಪ್ಲಾಸ್ಟಿಕ್ ಸೇವನೆಯು ಜೀರ್ಣಾಂಗದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ದೇಹದ ಆಂತರಿಕ ಅಂಗಗಳಿಗೆ ಹಾನಿ ಉಂಟುಮಾಡಬಹುದು. ಪ್ಲಾಸ್ಟಿಕ್‌ಗಳನ್ನು ತಿನ್ನುವುದರಿಂದ ಪ್ರಾಣಿಗಳಿಗೆ ಉಸಿರುಗಟ್ಟಿಸಬಹುದು. ನಂತರ ಆಹಾರ ಸೇವಿಸಲಾಗದೆ ಹಸಿವಿನಿಂದ ಸಾಯಬಹುದು” ಎಂದು ಡಾ ಯಶಸ್ವಿ ಹೇಳಿದ್ದಾರೆ.