ತುಮಕೂರು: ಜಿಲ್ಲೆಯ ತುರುವೇಕೆರೆ ಹಾಗೂ ಕೊರಟಗೆರೆಯಲ್ಲಿ ಗ್ರಾಮದಲ್ಲಿ ವಿಚಿತ್ರ ಕಾಯಿಲೆಯೊಂದು ಕಾಣಿಸಿಕೊಂಡಿದೆ. ಶಾಲಾ ಮಕ್ಕಳ ಕಾಲಲ್ಲಿ ದಿಢೀರನೆ ಕಪ್ಪು ಚುಕ್ಕೆಗಳು ಕಾಣಿಸಿಕೊಂಡಿದ್ದು ಪೋಷಕರಲ್ಲಿ ಆತಂಕ ಉಂಟಾಗಿದೆ. ಕೊರಟಗೆರೆ ತಾಲೂಕಿನ ಯಲಚೇನಹಳ್ಳಿ ಹಾಗೂ ತುರುವೇಕೆರೆ ತಾಲೂಕಿನ ಕುಣಿಕೇನಹಳ್ಳಿಯ ಮಕ್ಕಳಲ್ಲಿ ಚರ್ಮದ ಫಂಗಸ್ ಕಂಡು ಬಂದಿದ್ದು ಪಾದಗಳಲ್ಲಿ ಕಪ್ಪು ಚುಕ್ಕೆಗಳಾಗಿವೆ. ಆಗಾಗ ತುರಿಕೆ ಕೂಡ ಆಗುತ್ತಿದ್ದು ಸದ್ಯ ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕುಣಿಕೇನಹಳ್ಳಿಯ ಗ್ರಾಮದ 21 ಮಕ್ಕಳು ಹಾಗೂ ಯಲಚೇನಹಳ್ಳಿ ಗ್ರಾಮದ 5 ಮಕ್ಕಳ ಅಂಗಾಲು-ಅಂಗೈಲ್ಲಿ ಡಾಟ್ ಇಟ್ಟಂತಹ ಕಪ್ಪು ಮಚ್ಚೆಗಳು ಕಾಣಿಸಿಕೊಂಡಿವೆ. ಕಳೆದ ಶನಿವಾರ ಶಾಲೆಯಿಂದ ಮನೆಗೆ ಮಕ್ಕಳು ವಾಪಾಸ್ ಬಂದ ಬಳಿಕ ಮಚ್ಚೆಗಳು ಕಾಣಿಸಿಕೊಂಡಿವೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಜೊತೆಗೆ ಶಾಲೆಯ ಶಿಕ್ಷಕನಿಗೂ ಮಚ್ಚೆಗಳು ಕಾಣಿಸಿಕೊಂಡಿವೆ. ಸದ್ಯ ತುರುವೇಕೆರೆ ಶಾಸಕ ಎಂ.ಟಿ ಕೃಷ್ಣಪ್ಪ ಹಾಗೂ ವೈದ್ಯರ ತಂಡ ಶಾಲೆಗೆ ಭೇಟಿ ಕೊಟ್ಟಿದ್ದು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.