ಕಾಯಕವೇ ಕೈಲಾಸ ಎಂದ ಬಸವಣ್ಣನ ಕಾಯಕವೇ ವಿಳಂಬ: ಬಸವ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಸಿಕ್ಕಿಲ್ಲ ಉದ್ಘಾಟನೆ ಭಾಗ್ಯ

ಬಾಗಲಕೋಟೆ: 2013ರಿಂದ 2018ರ ವರೆಗೆ ಸತತ ಐದು ವಷರ್ಗಳ ಕಾಲ ಯಶಸ್ವಿಯಾಗಿ ಆಡಳಿತ ನಡೆಸಿದ್ದ ಆಗಿನ ಸಿಎಂ ಸಿದ್ದರಾಮಯ್ಯನವರು ಅನೇಕ ಕಾರ್ಯಕ್ರಮಗಳಿಗೆ ಭೂಮಿ ಪೂಜೆ ನೆರವೇರಿಸಿದ್ದರು. ಆದ್ರೆ 2018ರ ಮಧ್ಯೆ ಬಂದ ಸರ್ಕಾರದ ಅವಧಿಯಲ್ಲಿ ಅದೆಷ್ಟೂ ಕಾಮಕಾರಿಗಳು ನೆನೆಗುದಿಗೆ ಬಿದ್ದವು. ಸದ್ಯ ಈಗ ಮತ್ತೆ ಸಿದ್ದರಾಮಯ್ಯ ಸರ್ಕಾರ ಬಂದಿದ್ದು ನನೆಗುದಿಗೆ ಬಿದ್ದ ಯೋಜನೆಗಳಿಗೆ ಮರು ಜೀವ ಸಿಗುವ ನಿರೀಕ್ಷೆ ಇದೆ. ಈ ಪೈಕಿ ಬಸವ ಅಂತಾರಾಷ್ಟ್ರೀಯ ಕೇಂದ್ರದ ಉದ್ಘಾಟನೆಯೂ ಒಂದು.

ಕಾಯಕವೇ ಕೈಲಾಸ ಎಂದ ಬಸವಣ್ಣನ ಐಕ್ಯಸ್ಥಳದಲ್ಲಿ ಕಾಯಕವೇ ವಿಳಂಬವಾಗಿದೆ. 2018ರಲ್ಲಿ ಸಿದ್ದರಾಮಯ್ಯನವರು ಭೂಮಿಪೂಜೆ ಮಾಡಿದ್ದ ಬಸವ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಇಂದಿಗೂ ಕೂಡ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ 2018ರ ಮಾರ್ಚ್ 11ರಂದು ಆಗಿನ ಸಿಎಂ ಆಗಿದ್ದ ಸಿದ್ದರಾಮಯ್ಯ ಭೂಮಿ ಪೂಜೆ ಸಲ್ಲಿಸಿದ್ದರು. ನಂತರ ಬಂದ ಸರಕಾರದಲ್ಲಿ ಈ ಕಾಮಗಾರಿಗಳು ನೆನೆಗುದಿಗೆ ಬಿದ್ದಿತ್ತು. ಬಸವಣ್ಣನ ವಿದ್ಯಾಭೂಮಿ ಹಾಗೂ ಐಕ್ಯರಾದ ಪುಣ್ಯ ಕ್ಷೇತ್ರ ಕೂಡಲಸಂಗಮವು ಗೊತ್ತಿಲ್ಲ ಗುರಿ ಇಲ್ಲದೇ ಬರೀ ಕಟ್ಟಡಗಳ ನಿರ್ಮಾಣಕ್ಕೆ ಮೀಸಲಾಗ್ತಿದೆ. ಏಕೆಂದರೆ 140 ಕೋಟಿ ವೆಚ್ಚದಲ್ಲಿ ಅಕ್ಷರಧಾಮ ಮಾದರಿಯಲ್ಲಿ ಬಸವ ಅಂತಾರಾಷ್ಟ್ರೀಯ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ. ಶಿಲಾನ್ಯಾಸಗೊಂಡು ಐದು ವರ್ಷಕ್ಕೂ ಅಧಿಕವಾಗಿದ್ದು ಇದುವರೆಗೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.

ಬಸವಣ್ಣ ಹಾಗೂ ಸಮಕಾಲಿನ ಶರಣರನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ನಿರ್ಮಾಣವಾದ ಈ ಕೇಂದ್ರ ಕೇವಲ ಕನಸಾಗಿಯೇ ಉಳಿಯಲಿದೆಯಾ ಎಂಬ ಆತಂಕ ಎದುರಾಗಿದೆ. ಬಸವೇಶ್ವರರ ಸಂದೇಶ ಸಮಾನತೆ, ಜಾತಿರಹಿತ ಸಮಾಜ,ಕಾಯಕ ಮಹತ್ವ, ದಾಸೋಹ, ಮಹಿಳಾ ಸ್ವಾತಂತ್ರ್ಯ, ಅನುಭವ ಮಂಟಪ, ಸನ್ನಿವೇಶಗಳನ್ನು ಚಿತ್ರಕಲೆ, ಶಿಲ್ಪಕಲೆ, ತ್ರಿ ಡಿ ತಂತ್ರಜ್ಞಾನ ಬಳಸಿ ಪ್ರದರ್ಶನ ಮಾಡುವುದು, ಬಸವ ಅಂತಾರಾಷ್ಟ್ರೀಯ ಮ್ಯೂಜಿಯಂ, ಶರಣ ಗ್ರಾಮ ನಿರ್ಮಾಣ ಕಲ್ಪನೆಯನ್ನು ಈ ಅಂತರಾಷ್ಟ್ರೀಯ ಕೇಂದ್ರದಲ್ಲಿ ಮಾಡಲಾಗಿದೆ.

ಕಾಮಗಾರಿ ಪೂರ್ಣವಾಗದ ಹಿನ್ನೆಲೆ ಉದ್ಘಾಟನೆ ಇಲ್ಲ

ಇನ್ನು ಮತ್ತೊಂದೆಡೆ ಕೂಡಲಸಂಗಮದಲ್ಲೇ 15 ಕೋಟಿ ರೂ ವೆಚ್ಚದಲ್ಲಿ 1998ರಲ್ಲಿ ಆರಂಭಗೊಂಡು 2006ರಲ್ಲಿ ಮುಕ್ತಾಯಗೊಂಡ ಭವನ ಹಾಳು ಕೊಂಪೆ ಆಗಿತ್ತು. ಭೂತ ಬಂಗಲೆಯಂತಿದ್ದ ಬೃಹತ್ ಕಟ್ಟಡಕ್ಕೆ ಇದೀಗ ಕೇವಲ ಬಿಳಿ ಬಣ್ಣ ಬಳಿಯಲಾಗಿದೆ. ಇದೀಗ ಆ ಕಟ್ಡಡದ ಪಕ್ಕದಲ್ಲಿ ಅಂದಾಜು 50 ಕೋಟಿ ವೆಚ್ಚದಲ್ಲಿ ಮತ್ತೊಂದು ಕಟ್ಟಡ ಕಾಮಗಾರಿ ನಡೆಯುತ್ತಿದ್ದಿಉ ಅದು ಆಮೆಗತಿಯಲ್ಲಿ ಸಾಗಿದೆ. ಕಾಮಗಾರಿ ಪೂರ್ಣವಾಗದ ಹಿನ್ನೆಲೆ ಉದ್ಘಾಟನೆ ಆಗಿಲ್ಲ. ಆಗ ಭೂಮಿ ಪೂಜೆ ಮಾಡಿದ್ಧ ಸಿದ್ದರಾಮಯ್ಯ ಇದೀಗ ಮತ್ತೆ ಸಿಎಂ ಆಗಿದ್ದು ಸಿದ್ದರಾಮಯ್ಯ ಸರಕಾರದಲ್ಲಿ ಬಸವ ಅಂತರಾಷ್ಟ್ರೀಯ ಕೇಂದ್ರ ಕಾಮಗಾರಿ ಪೂರ್ಣವಾಗಲಿ ಎಂದು ಜನರು ಮನವಿ ಮಾಡಿದ್ದಾರೆ.

ಇದರಲ್ಲೂ ಕಮೀಷನ್ ದಂಧೆ ನಡೆದಿದೆ

ಈ ಬಗ್ಗೆ ಮಾತನಾಡಿದ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಇದು ನಾನು ಶಾಸಕ ಹಾಗೂ ಸಿದ್ದರಾಮಯ್ಯ 2018ರ ಅವಧಿಯಲ್ಲಿ ಸಿಎಂ ಆಗಿದ್ದ ವೇಳೆ ಹಣ ಬಿಡುಗಡೆಯಾಗಿದೆ. ಆದರೆ ಮುಂದೆ ಬಂದ ಸರಕಾರ ಹಾಗೂ ಆಗ ಹುನಗುಂದ ಶಾಸಕರಾಗಿದ್ದ ದೊಡ್ಡನಗೌಡ ಪಾಟಿಲ್ ಇದರ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಲ್ಲೂ ಕಮೀಷನ್ ದಂಧೆ ನಡೆದಿದೆ. ಈ ಬಗ್ಗೆ ತನಿಖೆ ನಡೆಸಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವ ಕಾರ್ಯ ಮಾಡುತ್ತೇನೆ ಎಂದು ತಿಳಿಸಿದರು.