ನವದೆಹಲಿ: ಉತ್ತರ ಭಾರತದ ಅತಿದೊಡ್ಡ ಸಿಮೆಂಟ್ ಕಂಪನಿ ಎನಿಸಿದ ಶ್ರೀ ಸಿಮೆಂಟ್ಸ್ (Shree Cements) ವಿರುದ್ಧ ಬಹಳ ಗಂಭೀರವೆನಿಸುವ ತೆರಿಗೆ ವಂಚನೆ ಆರೋಪ ಕೇಳಿಬಂದಿದೆ. ರಾಜಸ್ಥಾನ ಮೂಲದ ಶ್ರೀ ಸಿಮೆಂಟ್ ಸಾವಿರಾರು ಕೋಟಿ ರೂ ಮೊತ್ತದ ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ರಾಜಸ್ಥಾನದ ಬೀವಾರ್, ಜೈಪುರ್, ಚಿತ್ತೋರಗಡ್ ಮತ್ತು ಅಜ್ಮೆರ್ನಲ್ಲಿರುವ ಶ್ರೀ ಸಿಮೆಂಟ್ಸ್ ಸಂಸ್ಥೆಯ ಕಚೇರಿಗಳಲ್ಲಿ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಈ ಹಗರಣ ಬೆಳಕಿಗೆ ಬಂದಿದೆ. ಒಟ್ಟು 23,000 ಕೋಟಿ ರೂನಷ್ಟು ತೆರಿಗೆ ವಂಚನೆ ನಡೆಸಲಾಗಿದೆ ಎಂದು ಎನ್ಡಿಟಿವಿ ವರದಿ ಪ್ರಕಟಿಸಿದೆ. ಇದು ನಿಜವೇ ಆಗಿದ್ದಲ್ಲಿ ಸಿಮೆಂಟ್ ಕಂಪನಿಯೊಂದು ಇಷ್ಟೊಂದು ಮೊತ್ತದ ತೆರಿಗೆ ವಂಚನೆ ಮಾಡಿ ಸಿಕ್ಕಿಬಿದ್ದಿರುವುದು ಇದೇ ಮೊದಲಾಗುತ್ತದೆ.
ಶ್ರೀ ಸಿಮೆಂಟ್ಸ್ನ ಕಚೇರಿಗಳ ಮೇಲೆ ತೆರಿಗೆ ಶೋಧ ಕಾರ್ಯಾಚರಣೆ ನಡೆದ ಬೆನ್ನಲ್ಲೇ ಷೇರುಪೇಟೆಯಲ್ಲಿ ಶ್ರೀ ಸಿಮೆಂಟ್ಸ್ ಕಂಪನಿಯ ಷೇರುಗಳು ಕುಸಿಯತೊಡಗಿವೆ. ಜೂನ್ 26, ಬೆಳಗ್ಗೆ 25,145.25 ರುಪಾಯಿ ಬೆಲೆಯೊಂದಿಗೆ ಆರಂಭಗೊಂಡ ಶ್ರೀ ಸಿಮೆಂಟ್ಸ್ ಷೇರು ಒಂದು ಹಂತದಲ್ಲಿ 22,630.75 ರೂಗೆ ಕುಸಿದುಹೋಗಿತ್ತು. 2900 ರೂಗಿಂತ ಹೆಚ್ಚು ಮೊತ್ತದ ಕುಸಿತವಾಗಿತ್ತು. ಈ ವರದಿ ಪ್ರಕಟಿಸುವ ಹೊತ್ತಿನಲ್ಲಿ ಎನ್ಎಸ್ಇನಲ್ಲಿ ಶ್ರೀ ಸಿಮೆಂಟ್ಸ್ನ ಷೇರುಬೆಲೆ 23,050 ರೂನಲ್ಲಿತ್ತು. ಮಾಮೂಲಿಯ ದಿನಗಳಲ್ಲಿ ದಿನವೊಂದಕ್ಕೆ ಸರಾಸರಿ 46,000 ಷೇರುಗಳು ಕೈಬದಲಾಯಿಸುತ್ತಿದ್ದವು. ಇವತ್ತು ಸೋಮವಾರ 85,000ಕ್ಕೂ ಹೆಚ್ಚು ಷೇರುಗಳ ವಹಿವಾಟು ನಡೆದಿದೆ
ಶ್ರೀ ಸಿಮೆಂಟ್ಸ್ ತೆರಿಗೆ ವಂಚನೆ ಏನು?
ನಕಲಿ ಒಪ್ಪಂದಗಳ ಮೂಲಕ ಶ್ರೀ ಸಿಮೆಂಟ್ಸ್ ಸಂಸ್ಥೆ ಪ್ರತೀ ವರ್ಷವೂ 1,200 ರಿಂದ 1,400 ಕೋಟಿ ರೂನಷ್ಟು ತೆರಿಗೆ ಹಣ ವಂಚಿಸುತ್ತಾ ಬಂದಿದೆ. ಇದರಿಂದ ಕೇಂದ್ರ ಸರ್ಕಾರ ಮತ್ತು ರಾಜಸ್ಥಾನ ಸರ್ಕಾರದ ಆದಾಯಕ್ಕೆ ಕೊಕ್ಕೆ ಬಿದ್ದಿದೆ ಎಂದು ಎನ್ಡಿಟಿವಿ ವರದಿಗಾರ ತನ್ನ ಮೂಲವೊಂದನ್ನು ಉಲ್ಲೇಖಿಸುತ್ತಾ ಬರೆದಿದ್ದಾರೆ. ಆದರೆ, ತೆರಿಗೆ ಇಲಾಖೆಯಿಂದಾಗಲೀ, ರಾಜಸ್ಥಾನ ಸರ್ಕಾರದಿಂದಲಾಗಲೇ, ಕೇಂದ್ರದಿಂದಾಗಲೀ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
1979ರಲ್ಲಿ ರಾಜಸ್ಥಾನದಲ್ಲಿ ಆರಂಭಗೊಂಡ ಶ್ರೀ ಸಿಮೆಂಟ್ಸ್ ಕಂಪನಿ ಸದ್ಯ ಕೋಲ್ಕತಾದಲ್ಲಿ ಪ್ರಧಾನ ಕಚೇರಿ ಹೊಂದಿದೆ. ರಾಜಸ್ಥಾನ, ಉತ್ತರಾಖಂಡ್, ಹರ್ಯಾಣ, ಉತ್ತರಪ್ರದೇಶ, ಛತ್ತೀಸ್ಗಡ ಮತ್ತು ಬಿಹಾರ ರಾಜ್ಯಗಳಲ್ಲಿ ಒಟ್ಟು 10ಕ್ಕೂ ಹೆಚ್ಚು ಸಿಮೆಂಟ್ ಉತ್ಪಾದಕ ಘಟಕಗಳನ್ನು ಹೊಂದಿದೆ. ವಿದ್ಯುತ್ ಘಟಕಗಳನ್ನೂ ಅದು ಹೊಂದಿದೆ.
ಈಗ ಬಂದಿರುವ ತೆರಿಗೆ ವಂಚನೆ ಆರೋಪಗಳನ್ನು ಶ್ರೀ ಸಿಮೆಂಟ್ಸ್ ಸಂಸ್ಥೆ ತಳ್ಳಿಹಾಕಿದೆ. ತಮ್ಮ ಕಚೇರಿಗಳಲ್ಲಿ ತೆರಿಗೆ ಸಮೀಕ್ಷೆ ನಡೆಯುತ್ತಿರುವುದು ಒಪ್ಪಿಕೊಂಡ ಅವರು, ಸರ್ವೆ ಇನ್ನೂ ನಡೆಯುತ್ತಿದೆ. ಪೂರ್ಣಗೊಂಡಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಯಲ್ಲಿರುವ ಅಂಶಗಳು ಸತ್ಯಕ್ಕೆ ದೂರವಾದುದು ಎಂದು ಸಂಸ್ಥೆಯ ಆಡಳಿತ ಮಂಡಳಿ ಹೇಳಿದೆ.