ಇಪಿಎಸ್: ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನಾಂಕ; 3ನೇ ಬಾರಿಗೆ ಗಡುವು ವಿಸ್ತರಣೆ ಆಗುತ್ತಾ?

ನವದೆಹಲಿ: ಇಪಿಎಫ್​ಒ ಹೊರಡಿಸಿದ ಪ್ರಕಟಣೆ ಪ್ರಕಾರ ಇಪಿಎಫ್ ಸದಸ್ಯರು ಹೆಚ್ಚುವರಿ ಪಿಂಚಣಿಗೆ (Higher Pension) ಅರ್ಜಿ ಸಲ್ಲಿಸಲು 2023 ಜೂನ್ 26ಕ್ಕೆ ಕೊನೆಯ ದಿನವಾಗಿದೆ. ಅಂದರೆ ಇವತ್ತು ಡೆಡ್​ಲೈನ್ ಇದೆ. ಈ ಹಿಂದೆ ಎರಡು ಬಾರಿ ಇದರ ಗಡುವು ವಿಸ್ತರಿಸಲಾಗಿತ್ತು. ಮೂಲ ಪ್ರಕಟಣೆ ಪ್ರಕಾರ 2023ರ ಮಾರ್ಚ್ 3ಕ್ಕೆ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನ ಇತ್ತು. ಅದನ್ನು 2023ರ ಮೇ 3ಕ್ಕೆ ವಿಸ್ತರಿಸಲಾಯಿತು. ನಂತರ ಎರಡನೇ ಬಾರಿ ಗಡುವು ವಿಸ್ತರಣೆ ಆಗಿ ಜೂನ್ 26ಕ್ಕೆ ಡೆಡ್​ಲೈನ್ ಎಂದು ನಿಗದಿಯಾಗಿದೆ. ಆದರೆ, ಬಹಳ ಉದ್ಯೋಗಿಗಳು ಆನ್​ಲೈನ್​ನಲ್ಲಿ ಹೆಚ್ಚುವರಿ ಪೆನ್ಷನ್​ಗೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ತಾಂತ್ರಿಕ ತೊಂದರೆ ಎದುರಾಗಿದೆ ಎಂದು ಕಳೆದ ವಾರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ತೋಡಿಕೊಂಡಿದ್ದರು. ಈ ಕಾರಣಕ್ಕೆ ಮೂರನೇ ಬಾರಿ ಇದರ ಗಡುವು ವಿಸ್ತರಿಸುವ ಸಾಧ್ಯತೆ ಇದೆ. ಆದರೂ ಕೂಡ ನೀವು ಹೆಚ್ಚುವರಿ ಪಿಂಚಣಿಗೆ ಅರ್ಹರಾಗಿದ್ದು ಇನ್ನೂ ಅರ್ಜಿ ಸಲ್ಲಿಸದಿದ್ದರೆ ಕೂಡಲೇ ಅರ್ಜಿ ಸಲ್ಲಿಕೆಗೆ ಪ್ರಯತ್ನಿಸಿ.

ಏನಿದು ಹೆಚ್ಚುವರಿ ಪಿಂಚಣಿ?

2014 ಸೆಪ್ಟಂಬರ್ 1ಕ್ಕೆ ಅಥವಾ ಅದಕ್ಕೆ ಮುಂಚಿನಿಂದಲೂ ಇಪಿಎಫ್ ಮತ್ತು ಇಪಿಎಸ್​ಗೆ ಸದಸ್ಯರಾದವರು ಹೆಚ್ಚುವರಿ ಇಪಿಎಸ್​ಗೆ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ. ಇಪಿಎಸ್​ನಲ್ಲಿ ಸಂಬಳ ಮಿತಿ 15,000 ರೂ ಇತ್ತು. ಅದಕ್ಕಿಂತ ಹೆಚ್ಚಿನ ಸಂಬಳಕ್ಕೆ ಇದು ಸಿಗುವುದಿಲ್ಲ. 15,000 ರೂಗಿಂತ ಹೆಚ್ಚು ಸಂಬಳ ಪಡೆಯುತ್ತಿರುವವರಿಗೂ ಹೆಚ್ಚುವರಿ ಪಿಂಚಣಿ ಅವಕಾಶ ಕೊಡುವಂತೆ ಸುಪ್ರೀಂಕೋರ್ಟ್ ಕಳೆದ ವರ್ಷ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ 2014ರ ಸೆಪ್ಟಂಬರ್ 1 ಮತ್ತು ಅದಕ್ಕಿಂತ ಮುಂಚಿನಿಂದ ಇಪಿಎಫ್ ಮತ್ತು ಇಪಿಎಸ್ ಸದಸ್ಯರಾದವರು ಹೆಚ್ಚುವರಿ ಪಿಂಚಣಿಗೆ ಅರ್ಜಿ ಸಲ್ಲಿಸಬಹುದು.

ಇಪಿಎಫ್ ಮತ್ತು ಇಪಿಎಸ್ ವ್ಯತ್ಯಾಸವೇನು?

ಇಪಿಎಫ್ ಎಂದರೆ ಎಂಪ್ಲಾಯೀ ಪ್ರಾವಿಡೆಂಟ್ ಫಂಡ್. ಇಪಿಎಸ್ ಎಂಬುದು ಎಂಪ್ಲಾಯೀ ಪೆನ್ಷನ್ ಸ್ಕೀಮ್. ಇಪಿಎಫ್​ನ ಹೆಚ್ಚುವರಿ ಜೋಡಣೆ ಇಪಿಎಸ್. ಇಪಿಎಫ್ ಸ್ಕೀಮ್​ನಲ್ಲಿ ಉದ್ಯೋಗಿಯ ಮೂಲವೇತನ ಮತ್ತು ಡಿಎ ಸೇರಿ ಒಟ್ಟು ಮೊತ್ತದ ಶೇ. 12ರಷ್ಟು ಭಾಗವನ್ನು ಉದ್ಯೋಗಿಯ ಸಂಬಳದಿಂದ ಕಡಿತಗೊಳಿಸಿ ಇಪಿಎಫ್ ಖಾತೆಗೆ ಪ್ರತೀ ತಿಂಗಳು ಜಮೆ ಮಾಡಲಾಗುತ್ತದೆ. ಉದ್ಯೋಗದಾತ ಸಂಸ್ಥೆಯಿಂದಲೂ ಶೇ. 12ರಷ್ಟು ಹಣದ ಕೊಡುಗೆ ಇರುತ್ತದೆ. 15,000 ರೂ ಮತ್ತು ಅದಕ್ಕಿಂತ ಕಡಿಮೆ ಸಂಬಳ ಇದ್ದವರು ಇಪಿಎಫ್ ಜೊತೆಗೆ ಇಪಿಎಸ್ ಸ್ಕೀಮ್ ಸಿಗುತ್ತದೆ. ಸಂಸ್ಥೆ ಕೊಡುವ ಶೇ. 12ರಷ್ಟು ಹಣದಲ್ಲಿ ಇಪಿಎಫ್​ಗೆ ಶೇ. 3.67ರಷ್ಟು ಹೋಗುತ್ತದೆ, ಇನ್ನುಳಿದ ಶೇ. 8.33ರಷ್ಟು ಹಣ ಇಪಿಎಸ್​ಗೆ ಹೋಗುತ್ತದೆ.

ಇಪಿಎಸ್ ಎಂಬುದು ಕಟ್ಟುನಿಟ್ಟಾದ ಪಿಂಚಣಿ ಸ್ಕೀಮ್. ಇದನ್ನು ಉದ್ಯೋಗಿ ನಿವೃತ್ತರಾದ ಬಳಿಕ ಪಿಂಚಣಿಗೆ ಮಾತ್ರ ಅನ್ವಯ ಆಗುವಂಥದ್ದು. ಈಗ ಇಪಿಎಸ್ ಖಾತೆಗೆ ಹೆಚ್ಚು ಹಣ ಹಾಕುವ ಅವಕಾಶ ಉದ್ಯೋಗಿಗೆ ಸಿಕ್ಕಿದೆ. ಆದರೆ, 2014ರ ಸೆಪ್ಟಂಬರ್ 1ರಿಂದಲೂ ಅವರು ಇಪಿಎಫ್ ಮತ್ತು ಇಪಿಎಸ್​ನ ಸದಸ್ಯರಾಗಿರಬೇಕು.