ಬೆಂಗಳೂರು: ಶಕ್ತಿ ಯೋಜನೆ ಆರಂಭಗೊಂಡ ಮೊದಲ ವಾರ ಮಹಿಳಾ ಪ್ರಯಾಣಿಕರಿಂದ ತುಂಬಿ ತಳುಕುತ್ತಿದ್ದ ಮೆಜೆಸ್ಟಿಕ್ ಮತ್ತು ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಇಂದು ಪ್ರಯಾಣಿಕರ ಸಂಖ್ಯೆ ಭಾರೀ ಇಳಿಕೆಯಾಗಿದೆ.
ಉಚಿತ ಬಸ್ ಪ್ರಯಾಣ ಪ್ರಾರಂಭವಾದಾಗಿನಿಂದ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ದೇವಸ್ಥಾನಗಳಿಗೆ, ಪುಣ್ಯಕ್ಷೇತ್ರಗಳಿಗೆ ಬಸ್‌ನಲ್ಲಿ ಸಂಚರಿಸುತ್ತಿದ್ದರು. ಇದೀಗ ಆಷಾಢ ಮಾಸ ಬಂದಿದ್ದು, ದೇವಸ್ಥಾನಕ್ಕೆ ಹೋಗುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಇದರ ಪರಿಣಾಮ ಸರ್ಕಾರಿ ಬಸ್ಸಿನ ಡ್ರೈವರ್ ಮತ್ತು ಕಂಡಕ್ಟರ್‌ಗಳು ಬಸ್‌ಗಳನ್ನು ನಿಲ್ಲಿಸಿಕೊಂಡು ಜನರಿಗಾಗಿ ಕಾಯುತ್ತಿದ್ದಾರೆ.
ಕಳೆದ ವಾರ ಬಸ್ ನಿಲ್ದಾಣಗಳಲ್ಲಿ ಜನರು ತುಂಬಿ ತುಳುಕುತ್ತಿದ್ದರು. ಆದರೆ ಇಂದು ಬೆಳಗ್ಗೆ ಬಸ್‌ಗಳೇ ಪ್ರಯಾಣಿಕರಿಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಪ್ರವಾಸಿ ತಾಣಗಳಾದ ಧರ್ಮಸ್ಥಳ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಬಸ್‌ಗಳಿಗೆ ಬರಲು ಮಹಿಳೆಯರೇ ಇಲ್ಲದಂತಾಗಿದೆ.
ಕಳೆದ ವಾರ ನಿಂತುಕೊಳ್ಳಲೂ ಜಾಗವಿರದಂತೆ ಪ್ರಯಾಣಿಕರು ಬಸ್‌ಗಳಲ್ಲಿ ಸಂಚರಿಸುತ್ತಿದ್ದರು. ಆದರೆ ಈಗ ಹಿಂದಿನ ದಿನಗಳಂತೆ ಕಂಡಕ್ಟರ್‌ಗಳೇ ನಿಂತು ಜನರನ್ನು ಕರೆಯುತ್ತಿದ್ದಾರೆ. ಹಬ್ಬ, ವಿಶೇಷ ದಿನಗಳನ್ನು ಹೊರತುಪಡಿಸಿ ಪ್ರಯಾಣಿಕರು ಬರುವುದು ಕಷ್ಟ ಎಂದು ಸಿಬ್ಬಂದಿ ಹೇಳಿದ್ದಾರೆ.