ಕೋಟಾ : ರಾಮ್‌ಲಾಲ್ ಭೋಯ್ (21) ಅವರು ತನ್ನ ನವಜಾತ ಮಗಳನ್ನು ನೋಡದೆ ಆರು ತಿಂಗಳ ಕಾಲ NEET-UG 2023 ಗಾಗಿ ರಾಜಸ್ಥಾನದ ಕೋಟಾದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಕೇಂದ್ರದಲ್ಲಿ ತಯಾರಿ ನಡೆಸಿದ್ದರು. ಭೋಯ್ ತನ್ನ ಐದನೇ ಪ್ರಯತ್ನದಲ್ಲಿ 720 ರಲ್ಲಿ 632 ಅಂಕಗಳನ್ನು ಗಳಿಸುವುದರೊಂದಿಗೆ ತ್ಯಾಗಕ್ಕೆ ತಕ್ಕ ಪ್ರತಿಫಲ ಪಡೆದಿದ್ದಾರೆ. ಚಿತ್ತೋರ್‌ಗಢ್ ಜಿಲ್ಲೆಯ ಘೋಸುಂದಾ ಗ್ರಾಮದ ನಿವಾಸಿ, ಭೋಯ್ ಅವರು 6 ನೇ ತರಗತಿಯಲ್ಲಿದ್ದಾಗ, 11 ವಯಸ್ಸಿನಲ್ಲಿಯೇ ವಿವಾಹವಾದವರು. ಅವರು ಮತ್ತು ಅವರ ಪತ್ನಿ ತಮ್ಮ ಪೋಷಕರ ಮನೆಯಲ್ಲಿ ಸಂಸಾರ ಹೂಡಲು ಪ್ರಾರಂಭಿಸಿದರು. ಅಲ್ಲಿರುವಾಗ, ಅವರಿಗೆ 18 ವರ್ಷ ತುಂಬಿದಾಗ, ಅವರ ಮನೆಯಲ್ಲಿ ಮಗಳು ಜನಿಸಿದಳು.
ತಾನು ಪರೀಕ್ಷೆಯನ್ನು ಬರೆದ ನಂತರವೇ ತನ್ನ ಮಗಳ ಮುಖವನ್ನು ನೋಡಿದ್ದು. ಅಷ್ಟೊತ್ತಿಗೆ ಆತನ ಮುದ್ದು ಮಗಳಿಗೆ ಆರು ತಿಂಗಳ ವಯಸ್ಸಾಗಿತ್ತು! ಎಂದು ರಾಮ್‌ಲಾಲ್ ಭೋಯ್ ಅವರು ಹೇಳಿದ್ದಾರೆ. ಹತ್ತನೇ ತರಗತಿಯವರೆಗೆ ತಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದಿದ ರಾಮ್‌ಲಾಲ್ ಭೋಯ್ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಕಲೆ, ವಾಣಿಜ್ಯ ಮತ್ತು ವಿಜ್ಞಾನದಿಂದ ಯಾವುದಾದರೂ ಒಂದು ಸ್ಟ್ರೀಮ್ ಅನ್ನು ಆಯ್ಕೆ ಮಾಡಲು ಗೊಂದಲಕ್ಕೊಳಗಾಗಿದ್ದರು. ಆದಾಗ್ಯೂ, ರಾಮ್‌ಲಾಲ್ ವಿಜ್ಞಾನದಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ್ದನ್ನು ಗಮನಿಸಿದ ಅವರ ಶಿಕ್ಷಕರೊಬ್ಬರು, ಅವರ ನೆರವಿಗೆ ಬಂದರು. ಗಣಿತದ ಭಯದಿಂದ ಜೀವಶಾಸ್ತ್ರವನ್ನು ಆಯ್ಕೆ ಮಾಡಿಕೊಳ್ಳುವಂತೆ ರಾಮ್‌ಲಾಲ್ ಗೆ ಸೂಚಿಸಿದರು.
“ಜೀವಶಾಸ್ತ್ರವನ್ನು ತೆಗೆದುಕೊಂಡ ನಂತರವೇ ನಾನು ವೈದ್ಯನಾಗಲು ನಿರ್ಧರಿಸಿದೆ, ಉದಯಪುರದ ಹಾಸ್ಟೆಲ್‌ನಲ್ಲಿ ಉಳಿದು 12 ನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿ ಓದಿದೆ” ಎಂದು ರಾಮ್‌ಲಾಲ್ ಹೇಳಿದ್ದಾರೆ. ಅವರು ತಮ್ಮ ಮೊದಲ ಮೂರು ಪ್ರಯತ್ನಗಳಲ್ಲಿ ಸ್ವಯಂ ಅಧ್ಯಯನವನ್ನು ಅವಲಂಬಿಸಿದ್ದರು.
ಅಲ್ಲಿ ಆತ ಒಟ್ಟು 720 ಅಂಕಗಳಿಗೆ 350, 320 ಮತ್ತು 362 ಅಂಕಗಳನ್ನು ಗಳಿಸಿದ. ರಾಮಲಾಲ್ ತನ್ನ ಮೂರನೇ ಪ್ರಯತ್ನದಲ್ಲಿ ವಿಫಲವಾದಾಗ, ಅವನ ಕುಟುಂಬವು ಅವನು ಓದುವುದನ್ನು ನಿಲ್ಲಿಸಿ ಜೀವನೋಪಾಯವನ್ನು ಪ್ರಾರಂಭಿಸುವಂತೆ ಸೂಚಿಸಿತು. ಆದರೆ, ಅದಕ್ಕೆ ರಾಮಲಾಲ್ ಸೊಪ್ಪು ಹಾಕಲಿಲ್ಲ. ಕೊನೆಗೆ ಆತನ ನಿರ್ಣಯಕ್ಕೆ ಮಣೆ ಹಾಕಿದ ಕುಟುಂಬವು ಅವನನ್ನು ತಯಾರಿಗಾಗಿ ಕೋಟಾಕ್ಕೆ ಕಳುಹಿಸಲು ನಿರ್ಧರಿಸಿತು. “ವೈದ್ಯನಾಗುವುದು ನನ್ನ ಏಕೈಕ ಗುರಿಯಾಗಿರುವುದರಿಂದ, ನಾನು ಐದನೇ ಪ್ರಯತ್ನಕ್ಕೆ ಹೋಗಲು ನಿರ್ಧರಿಸಿದೆ ಮತ್ತು ಕೋಟಾದಲ್ಲಿ ಉಳಿಯಲು ನಿರ್ಧರಿಸಿದೆ” ಎಂದು ರಾಮಲಾಲ್ ಈಗ ಹೇಳಿದ್ದಾರೆ. ಪರೀಕ್ಷೆಗೆ ತಯಾರಿ ನಡೆಸುವಾಗ ರಾಮ್‌ಲಾಲ್ ಮೊಬೈಲ್ ಫೋನ್‌ಗಳಿಂದ ದೂರವಿದ್ದರು.