ನವದೆಹಲಿ(ಜೂ.23) ಪೆಟ್ರೋಲ್ ಬೆಲೆ ಏರಿಕೆಯಿಂದ ಹೈರಾಣಾಗಿದ್ದ ಜನತೆಗೆ ಬಿಜೆಪಿ ಆಡಳಿತದ ರಾಜ್ಯದಲ್ಲಿ ಆಯಾ ಸರ್ಕಾರಗಳು ತೆರಿಗೆ ಇಳಿಸಿ ಕೊಂಚ ಹೊರೆ ಕಡಿಮೆ ಮಾಡಿತ್ತು. ಇದೀಗ ಜನಸಾಮಾನ್ಯರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಇಂಧನ ಮಾರ್ಕೆಟಿಂಗ್ ಕಂಪನಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ ಮೇಲೆ 4 ರಿಂದ 5 ರೂಪಾಯಿ ಕಡಿತಗೊಳಿಸಲು ನಿರ್ಧರಿಸಿದೆ. ಆಗಸ್ಟ್ ತಿಂಗಳನಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದೇಶಾದ್ಯಂತ ಇಳಿಕೆಯಾಗಲಿದೆ.
ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 80 ಡಾಲರ್‌ಗಿಂತಲೂ ಕಡಿಮೆಯಾಗಿದೆ.ಹೀಗಾಗಿ ಆಯಿಲ್ ಮಾರ್ಕೆಟಿಂಗ್ ಕಂಪನಿ ಬೆಲೆ ಇಳಿಕೆ ಮಾಡಲು ನಿರ್ಧರಿಸಿದೆ. ಈ ಕುರಿತು ಕೇಂದ್ರ ಸಚಿವಾಲಯದ ಜೊತೆ ಕೆಲ ಸುತ್ತಿನ ಮಾತುಕತೆ ನಡೆಸಿದೆ. ಶೀಘ್ರದಲ್ಲೇ ಅಂತಿಮ ಮುದ್ರೆ ಬೀಳಲಿದೆ. ಈಗಾಗಲೇ ಕಚ್ಚಾ ತೈಲ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಇದರಿಂದ ತೈಲ ಕಂಪನಿಗಳು ಲೀಟರ್ ಪೆಟ್ರೋಲ್‌ನಿಂದ 6.8 ರೂಪಾಯಿ ಹಾಗೂ ಡೀಸೆಲ್‌ನಿಂದ 50 ಪೈಸೆ ಲಾಭ ಗಳಿಸುತ್ತಿವೆ. ಹೀಗಾಗಿ ಆಗಸ್ಟ್ ತಿಂಗಳಿನಿಂದ ಇಂಧನ ಬೆಲೆ ಇಳಿಕೆಯಾಗಲಿದೆ.
ಕಳೆದ ವರ್ಷ ಕಚ್ಚಾ ತೈಲದ ಬೆಲೆ ಬ್ಯಾರೆಲ್ 139 ಡಾಲರ್ ಇತ್ತು. ಇದೀಗ ಅದು 76 ರಿಂದ 80 ಡಾಲರ್‌ಗೆ ಇಳಿಕೆಯಾಗಿದೆ. ಕಚ್ಚಾತೈಲ ಬೆಲೆ ಏರಿದ್ದ ಸಮಯದಲ್ಲಿ ಮಾರಾಟಗಾರರು ಪೆಟ್ರೋಲ್‌ಗೆ ಲೀಟರ್‌ಗೆ 17.4 ಮತ್ತು ಡೀಸೆಲ್‌ಗೆ 27.7 ರು. ನಷ್ಟಅನುಭವಿಸಿದ್ದವು. ಕಚ್ಚಾಬೆಲೆ ಸತವಾಗಿ ಇಳಿಯುತ್ತಿದ್ದರೂ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೋರೇಶನ್, ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿ. ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿ. ಸಂಸ್ಥೆಗಳು ಸುಮಾರು 1 ವರ್ಷದಿಂದ ದೈನಂದಿನ ಆಧಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪರಿಷ್ಕರಣೆ ಮಾಡಿಲ್ಲ.ಇದೀಗ ಆಗಸ್ಟ್ ತಿಂಗಳನಿಂದ ಬೆಲೆ ಇಳಿಸಲು ನಿರ್ಧರಿಸಿದೆ.
ಇತ್ತೀಚೆಗೆ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ, ಬೆಲೆ ಇಳಿಸಿದೆ ಇರುವುದಕ್ಕೆ ಅಧಿಕಾರಿಗಳು ಕಾರಣವನ್ನೂ ನೀಡಿದ್ದರು. ಕಳೆದ ವರ್ಷ ಕಚ್ಚಾ ತೈಲದ ಬೆಲೆ ಇಂಧನ ಮಾರಾಟ ಬೆಲೆಗಿಂತ ಹೆಚ್ಚಿದ್ದರೂ ಸಹ ಈ ಸಂಸ್ಥೆಗಳು ಬೆಲೆ ಏರಿಕೆ ಮಾಡಿರಲಿಲ್ಲ. ಹೀಗಾಗಿ ಈಗ ಈ ನಷ್ಟವನ್ನು ತುಂಬಿಕೊಳ್ಳುವ ಸಲುವಾಗಿ ಬೆಲೆ ಪರಿಷ್ಕರಣೆ ಮಾಡಲಾಗುತ್ತಿಲ್ಲ. ಇದರಲ್ಲಿ 3 ಕಂಪನಿಗಳು ಈಗಾಗಲೇ ಪೆಟ್ರೋಲ್ ಮಾರಾಟದಲ್ಲಿ ಲಾಭದಲ್ಲಿವೆ. ಆದರೆ ಡೀಸೆಲ್ ಮಾರಾಟದಲ್ಲಿ ಸಾಕಷ್ಟುನಷ್ಟಅನುಭವಿಸಿದ್ದು, ಈಗ ನಷ್ಟವೂ ಇಲ್ಲ, ಲಾಭವೂ ಇಲ್ಲ ಎಂಬ ಸ್ಥಿತಿಗೆ ಬಂದಿವೆ. ಹೀಗಾಗಿ ಈಗಿನ ಲಾಭದ ಹಣವನ್ನು ಡೀಸೆಲ್‌ನ ಹಿಂದಿನ ನಷ್ಟತುಂಬಿಕೊಳ್ಳಲು ಬಳಕೆ ಮಾಡಲಾಗುತ್ತಿದೆ. ಬೆಲೆ ಮತ್ತಷ್ಟುಸ್ಥಿರವಾದರೆ ಮುಂದೆ ಬೆಲೆ ಪರಿಷ್ಕರಣೆ ಮಾಡಬಹುದು’ ಎಂದಿದ್ದರು.
ಇದುವರೆಗೆ ಬೆಲೆ ಇಳಿಕೆ ಮಾಡದೆ ಇದೀಗ ಇಂಧನ ಬೆಲೆ ಕಡಿತಕ್ಕೆ ಮುಂದಾಗಿರುವುದು ರಾಜಕೀಯ ಎಂಬ ಆರೋಪಗಳು ಕೇಳಿಬಂದಿದೆ. ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳ ಚುನಾವಣೆ, ಬಳಿಕ ಲೋಕಸಭಾ ಚುನಾವಣೆ ಕಾರಣದಿಂದ ಇದೀಗ ಬೆಲೆ ಇಳಿಕೆಗೆ ಮುಂದಾಗಿದೆ ಎಂಬ ಆರೋಪಗಳು ಕೇಳಿಬಂದಿದೆ.