ಕೋಲಾರ: ಜಿಲ್ಲೆಯಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲಮನ್ನಾ ವದಂತಿ ವಿಚಾರವಾಗಿ, ಡಿಸಿಸಿ ಬ್ಯಾಂಕ್ ಸಿಬ್ಬಂದಿ ಮೇಲೆ ಪದೇ ಪದೇ ಹಲ್ಲೆ ಪ್ರಕರಣ ಕೇಳಿಬರುತ್ತಿದ್ದು, ಇದರಿಂದ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗುತ್ತಿರುವ ಹಿನ್ನೆಲೆ, ಇದೀಗ ಸಾಲ ವಸೂಲಿಗೆ ಹೋಗದಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಸಿಬ್ಬಂದಿಗೆ ಕೋಲಾರ ಎಸ್ಪಿ ನಾರಾಯಣ್ ಖಡಕ್ ಸೂಚನೆ ಕೊಟ್ಟಿದ್ದು, ಅದರಂತೆ ಕಾನೂನು ಕೈಗೆತ್ತಿಕೊಳ್ಳದ್ದಂತೆ ಮಹಿಳೆಯರಿಗೂ ಸೂಚಿಸಿದ್ದಾರೆ. ಇನ್ನು ಜಿಲ್ಲೆಯ ಪರಿಸ್ಥಿತಿ ಬಗ್ಗೆ ಸರ್ಕಾರಕ್ಕೆ ಈಗಾಗಲೇ ವರದಿ ಕಳುಹಿಸಿದ್ದು, ಸರ್ಕಾರದಿಂದ ನಿರ್ದೇಶನ ಬರುವವರೆಗೆ ವಸೂಲಿಗೆ ಹೋಗದಂತೆ ತಿಳಿಸಿದ್ದಾರೆ.
ಇನ್ನು ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸಾಲ ಮನ್ನಾ ಮಾಡಬೇಕೆನ್ನುವ ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ನಿತ್ಯ ಮಹಿಳೆಯರು ಹೋರಾಟ ನಡೆಸುತ್ತಿದ್ದಾರೆ. ಅದರಂತೆ ನಿನ್ನೆ(ಜೂ.22) ಸಾಲ ವಸೂಲಿಗೆಂದು ಡಿಸಿಸಿ ಬ್ಯಾಂಕ್ ಸಿಬ್ಬಂದಿಗಳು ಗ್ರಾಮಕ್ಕೆ ಬಂದಿದ್ದು, ಇದರಿಂದ ರೊಚ್ಚಿಗೆದ್ದ ಮಹಿಳೆಯರು, ಡಿಸಿಸಿ ಬ್ಯಾಂಕ್ ಸಿಬ್ಬಂದಿಯ ಬೈಕ್ ಎಂದುಕೊಂಡು ತಮ್ಮೂರಿನವರ ಬೈಕ್ಗೆ ಬೆಂಕಿ ಹಾಕಿ ಎಡವಟ್ಟು ಮಾಡಿಕೊಂಡಿದ್ದರು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ಎಸ್ಪಿ ಸಾಲ ವಸೂಲಾತಿಗೆ ತೆರಳದಂತೆ ಸೂಚಿಸಿದ್ದಾರೆ.
ಇನ್ನು ಕೋಲಾರದಲ್ಲಿ ಸಾಲ ಮನ್ನಾದ ಕಿಚ್ಚು ಕಳೆದ 15 ದಿನಗಳಿಂದ ನಿರಂತರವಾಗಿ ನಡೆಯುತ್ತಲೇ ಇದೆ. ಸಾಲ ಮನ್ನಾದ ಕಿಚ್ಚು ಬೆಂಕಿಯ ಕಿಡಿಗಳಂತೆ ಎಲ್ಲೆಡೆ ಹರಡುತ್ತಿತ್ತು. ಕಳೆದೆ ಒಂದು ವಾರದಲ್ಲಿ ಇದು ನಾಲ್ಕೈನೇ ಪ್ರಕರಣವಾಗಿದೆ, ಸಾಲ ಮರುಪಾವತಿಗೆ ಹೋದಂತಹ ಸಿಬ್ಬಂದಿಯನ್ನು ಮಹಿಳೆಯರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಳ್ಳುವ ಜೊತೆಗೆ ಹಲ್ಲೆ ಯತ್ನಕ್ಕೆ ಮುಂದಾಗಿದ್ದರು. ಇದೇ ಜೂ8 ರಂದು ಕೋಲಾರ ನಗರದಲ್ಲಿ ಮಹಿಳೆಯರು ಸಾಲ ಕೇಳಲು ಹೋದ ಬ್ಯಾಂಕ್ ಸಿಬ್ಬಂದಿವಿರುದ್ದ ಗಲಾಟೆ ಮಾಡಿದ್ರು. ನಂತರ ಜೂನ್.14 ರಂದು ಗ್ರಾಮದಲ್ಲಿ ಬ್ಯಾನರ್ ಸಾಲ ಕೇಳಲು ಬರದಂತೆ ಬ್ಯಾನರ್ ಹಾಕಿದ್ರು. ಅದಾದ ನಂತರ ಜೂ.17 ರಂದು ಮುಳಬಾಗಲು ತಾಲೂಕಿನ ಹಿರಣ್ಯಗೌಡನಹಳ್ಳಿಯಲ್ಲಿ ಸಾಲ ವಸೂಲಿಗೆ ತೆರಳಿದ್ದ ಸಿಬ್ಬಂದಿಗೆ ಹಗ್ಗದಲ್ಲಿ ಕಟ್ಟಲು ಮುಂದಾಗಿದ್ದರು.
ಮಾಲೂರು ತಾಲೂಕಿನ ರಾಜೇನಹಳ್ಳಿಯಲ್ಲಿ ಜೂ.18ರಂದು ಸಿಬ್ಬಂದಿಯನ್ನು ಮಹಿಳೆಯರು ಕೋಲುಗಳನ್ನು ಹಿಡಿದು ಗ್ರಾಮದಿಂದಲೇ ಹೊರ ಹಾಕಿದ್ದರು. ಬಳಿಕ ಮುಳಬಾಗಿಲು ಬಿಸ್ನಹಳ್ಳಿಯಲ್ಲಿ ಸಿಬ್ಬಂದಿಯ ಮೇಲೆ ಹಲ್ಲೆ ಯತ್ನಕ್ಕೆ ಪ್ರಯತ್ನಿಸಿದ್ದರರು. ಸದ್ಯ ಈ ಘಟನೆಗಳ ನಂತರ ಸದ್ಯ ಕೋಲಾರ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು, ಸರ್ಕಾರದಿಂದ ಸೂಚನೆ ಬರುವವರೆಗೂ ಬ್ಯಾಂಕ್ ಸಿಬ್ಬಂದಿಗಳು ಸಾಲ ವಸೂಲಿಗೆ ಹೋಗಬಾರದು ಎಂದು ಎಸ್ಪಿ ತಿಳಿಸಿದ್ದಾರೆ. ಒಟ್ಟಾರೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರುಗಳು ಚುನಾವಣೆಗಿಂತ ಮೊದಲು ನೀಡಿರುವ ಅದೊಂದು ಹೇಳಿಕೆಗಳು ಇವತ್ತು ಮಹಿಳೆಯರನ್ನು ರೊಚ್ಚಿಗೇಳುವಂತೆ ಮಾಡಿದ್ದು, ಸರ್ಕಾರ ಸದ್ಯ ತಾನು ಕೊಟ್ಟ ಮಾತಿನಂತೆ ಸಾಲ ಮನ್ನಾ ಮಾಡುತ್ತಾ, ಇಲ್ಲ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗುತ್ತದೆಯಾ?, ಕಾದು ನೋಡಬೇಕಿದೆ.