ಹಳಿಯಾಳ: ನಿವೃತ್ತರಾದ ತೇರಗಾಂವ್ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಬಸವರಾಜ್ ಶಿವಪ್ಪ ಅವರಿಗೆ ಸನ್ಮಾನ

ತಾಲ್ಲೂಕಿನ ತೆರಗಾಂವ್ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ 15 ವರ್ಷಗಳಿಂದ ಅನುಪಮ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಪ್ರಾಚಾರ್ಯ ಬಸವರಾಜ್ ಶಿವಪ್ಪ ಅವರಿಗೆ ಕಾಲೇಜಿನ ಉಪನ್ಯಾಸಕ ವೃಂದ ಮತ್ತು ಸಿಬ್ಬಂದಿ ವರ್ಗದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯ್ತು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಬಸವರಾಜ್ ಶಿವಪ್ಪ ಅವರು ಕಾಲೇಜಿನ ಉಪನ್ಯಾಸಕನಾಗಿ ವೃತ್ತಿ ಸೇರ್ಪಡೆಯಾಗಿ ಪ್ರಾಚಾರ್ಯನಾಗಿ ಸೇವೆ ಸಲ್ಲಿಸುವ ಮಹತ್ವದ ಅವಕಾಶ ನನ್ನ ಪಾಲಿಗೆ ಒದಗಿ ಬಂದಿತ್ತು. ಇಷ್ಟು ವರ್ಷಗಳ ಸೇವೆ ನನಗೆ ಆತ್ಮತೃಪ್ತಿ ಮತ್ತು ಜೀವನಸಂತೋಷವನ್ನು ನೀಡಿದೆ. ಶೈಕ್ಷಣಿಕವಾಗಿ ಸೇವೆ ಮಾಡಲು ಅವಕಾಶ ದೊರೆತಿರುವುದೆ ನನ್ನ ಭಾಗ್ಯ ಎಂದ ಅವರು ಇಷ್ಟು ವರ್ಷಗಳವರೆಗೆ ನನ್ನನ್ನು ಬೆಂಬಲಿಸಿ, ಸಹಕರಿಸಿ, ಪ್ರೋತ್ಸಾಹಿಸಿದ ಇಲಾಖೆಯ ಎಲ್ಲಾ ಅಧಿಕಾರಿ ವೃಂದದವರಿಗೆ, ಸಹೋದ್ಯೋಗಿಗಳಿಗೆ, ಊರ ಗ್ರಾಮಸ್ಥರಿಗೆ, ವಿದ್ಯಾರ್ಥಿಗಳಿಗೆ ಮತ್ತು ಹಳೆ ವಿದ್ಯಾರ್ಥಿಗಳಿಗೆ ಸದಾ ಋಣಿಯಾಗಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರುಗಳಾದ ಶ್ರೀನಿಕ್ ಮುನವಳ್ಳಿ, ಅತಿಜ ನಾಯ್ಕ, ಹಳೆ ವಿದ್ಯಾರ್ಥಿಗಳಾದ ನಾಗರಾಜ್ ಸುಣಗಾರ್, ಸಾಗರ್ ಗರಡಿಮನಿ, ಸಾಹಿಲ್ ಪುಂಗಿ, ಕೃಷ್ಣ ಬೋವಿ, ಸೋಮನಾಥ್, ಕಾಲೇಜಿನ ಉಪನ್ಯಾಸಕ ವೃಂದ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.