ಕುಮಟಾ : ತಾಲೂಕಿನ ಕತಗಾಲ ಸಮೀಪದ ದೇವಿಮನೆ ಘಟ್ಟದ ನಿರ್ಜನ ಪ್ರದೇಶದಲ್ಲಿ ಶನಿವಾರ ಸಿಕ್ಕ ಅಪರಿಚಿತ ಮಹಿಳೆಯ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಕುಮಟಾ ಪೋಲೀಸರು ಯಶಸ್ವಿಯಾಗಿದ್ದಾರೆ..
ಮೃತಳ ಕುಟುಂಬಸ್ಥರಾದ ಮೂವರು ಮಹಿಳೆಯರು ಸೇರಿದಂತೆ ಐವರು ಆರೋಪಿಗಳನ್ನು ಕುಮಟಾ ಪೋಲೀಸರು ಇದೀಗ ಬಂಧಿಸಿದ್ದಾರೆ.
ಕೊಲೆಯಾದ ಮಹಿಳೆ ಗದಗ್ ಜಿಲ್ಲೆಯ ಲಕ್ಷ್ಮೇಶ್ವರ ಮೂಲದ ತನುಜಾ ಎಂಬುದು ತಿಳಿದು ಬಂದ ತಕ್ಷಣ ಚುರುಕಾದ ಪೋಲೀಸರು ತಮಗೆ ಸಿಕ್ಕ ಸಾಕ್ಷ್ಯಾಧಾರಗಳ ಮೇಲೆ ಸುಳಿವನ್ನು ಹುಡುಕಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನುಜಾಳ ನಡತೆಯನ್ನು ಶಂಕಿಸಿ ಅವಳ ಗಂಡನ ಅಣ್ಣ, ಹಾಗೂ ಅವನ ಚಿಕ್ಕಮ್ಮಂದಿರಾದ ಗೌರಮ್ಮ ಮತ್ತು ನೀಲಮ್ಮ, ಹಾಗೂ ಸಂಬಂಧಿಗಳಾದ ಕಾವ್ಯ ಮತ್ತು ಅಮಿತ್ ಎಲ್ಲರೂ ಸೇರಿ ಅವಳಿಗೆ ಊಟದಲ್ಲಿ ನಿದ್ದೆ ಬರುವ ಮಾತ್ರೆ ಹಾಕಿ, ಮಲಗಿರುವಾಗ ಚೂಡಿದಾರ್ ವೇಲ್ ನಿಂದ ಕತ್ತು ಹಿಸುಕಿ ಕೊಲೆ ಮಾಡಿ, ಸಾಕ್ಷಿ ಸಿಗಬಾರದೆಂದು ಕುಮಟಾ-ಶಿರಸಿ ಮಾರ್ಗ ಮಧ್ಯದಲ್ಲಿರುವ ದೇವಿಮನೆ ಘಾಟ್ ನ ನಿರ್ಜನ ಪ್ರದೇಶದಲ್ಲಿ ಶವವನ್ನು ಎಸೆದು ಹೋಗಿದ್ದಾರೆ. ಮೃತಳ ನಡತೆ ಸರಿ ಇಲ್ಲದ ಕಾರಣ ಕೊಲೆ ಮಾಡಿರುವುದಾಗಿ ಆರೋಪಿಗಳು ಪೋಲೀಸರೆದುರು ತಪ್ಪೊಪ್ಪಿಕೊಂಡಿದ್ದಾರೆ..
ಕೇವಲ 5 ದಿನಗಳಲ್ಲಿ ಕೊಲೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಕುಮಟಾದ ಪೋಲೀಸರ ಕಾರ್ಯ ವೈಖರಿಗೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಎನ್. ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದ ಕಾರ್ಯಾಚರಣೆಯಲ್ಲಿ ಕಾರವಾರ ಎಸ್.ಪಿ ವಿಷ್ಣುವರ್ಧನ್, ಹೆಚ್ಚುವರಿ ಪೋಲೀಸ್ ಅಧೀಕ್ಷಕ ಸಿ.ಟಿ.ಜಯಕುಮಾರ್ ಮತ್ತು ಭಟ್ಕಳ ಡಿವೈಎಸ್ಪಿ ಶ್ರೀಕಾಂತ ಮಾರ್ಗದರ್ಶನದಲ್ಲಿ ಕುಮಟಾ ಸಿಪಿಐ ತಮ್ಮಪ್ಪ ನಾಯ್ಕ ನೇತೃತ್ವದಲ್ಲಿ ಪಿಎಸ್ಐ ಗಳಾದ ಸಂಪತ್ ಕುಮಾರ್, ನವೀನ್ ನಾಯ್ಕ, ಸಿಬ್ಬಂದಿಯಾದ ಲೋಕೇಶ್, ದಯಾನಂದ ನಾಯ್ಕ, ಪ್ರದೀಪ, ಗುರು ನಾಯಕ್, ಮಹಿಳಾ ಸಿಬ್ಬಂದಿ ರೂಪಾ ನಾಯ್ಕ, ಮಹಾದೇವಿ ಗೌಡ ಇತರರು ಪಾಲ್ಗೊಂಡಿದ್ದರು..