ದಾಂಡೇಲಿ:ವಿದ್ಯುತ್ ದರ ಏರಿಕೆಯನ್ನು ಖಂಡಿಸಿ ನಗರದ ಅಂಬೇವಾಡಿ ಕೈಗಾರಿಕಾ ವಸಾಹತು ಪ್ರದೇಶ ವ್ಯಾಪ್ತಿಯಲ್ಲಿ ಬರುವ ಹಾಗೂ ಇನ್ನಿತರ ಸಣ್ಣ ಕೈಗಾರಿಕೋದ್ಯಮಿಗಳು ಇಂದು ಗುರುವಾರ ತಮ್ಮ ಉತ್ಪಾದನಾ ಚಟುವಟಿಕೆಯನ್ನು ಸ್ಥಗಿತಗೊಳಿಸಿ, ಆನಂತರ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ, ದಾಂಡೇಲಿ ನಗರದಲ್ಲಿರುವ ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಪ್ರತಿಭಟನೆಯನ್ನು ನಡೆಸಿದರು.
ವಿದ್ಯುತ್ ದರ ಏರಿಕೆಯಾಗಿರುವುದನ್ನು ಕಡಿಮೆಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಉಪ ತಹಶೀಲ್ದಾರ್ ರಾಘವೇಂದ್ರ ಪೂಜೇರಿಯವರ ಮೂಲಕ ನೀಡಲಾಯ್ತು. ಮನವಿಯಲ್ಲಿ ಕೋವಿಡ್ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಿ ಸುಧಾರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ವಿದ್ಯುತ್ ದರವನ್ನು ದುಪ್ಪಟ್ಟು ಏರಿಕೆ ಮಾಡಿರುವುದರಿಂದ ಸಣ್ಣ ಕೈಗಾರಿಕೆಗಳನ್ನು ನಡೆಸಲು ಕಷ್ಟವಾಗತೊಡಗಿದೆ. ಸಣ್ಣ ಕೈಗಾರಿಕೆಗಳನ್ನು ನಂಬಿರುವ ನಗರದ ಸಾವಿರಾರೂ ಕಾರ್ಮಿಕರ ಬದುಕು ಬೀದಿಗೆ ಬೀಳುವ ಸಾಧ್ಯತೆಯಿದೆ. ಕಾರ್ಮಿಕರು ಮತ್ತು ಸಣ್ಣ ಕೈಗಾರಿಕೋದ್ಯಮಿಗಳ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ವಿದ್ಯುತ್ ದರವನ್ನು ಕಡಿಮೆ ಮಾಡಬೇಕು. ಇಲ್ಲವಾದಲ್ಲಿ ಸಣ್ಣ ಕೈಗಾರಿಕೆಗಳು ಸ್ಥಗಿತಗೊಂಡು ಕಾರ್ಮಿಕರ ಬದುಕು ಅತಂತ್ರವಾಗಲಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಈ ಸಂದರ್ಭದಲ್ಲಿ ಸಣ್ಣ ಕೈಗಾರಿಕೋದ್ಯಮಿಗಳಾಗಿರುವ ಪ್ರೇಮಾನಂದ ಗವಸ್, ಅಶೋಕ್.ಎನ್.ಸಾಳಸಕರ್, ಅನಿಲ್ ದಂಡಗಲ್, ರಫೀಕ್ ಖಾನ್, ಜಾನ್ಸನ್ ರೋಡ್ರಿಗಸ್, ಸುನೀಲ್ ಸೋಮನಾಚೆ, ರಾಜೇಸಾಬ ಜಂಬಗಿ, ಜಾಕಿ.ಬಿ.ಡಿಸೋಜಾ, ಸಂತಾನ ಫರ್ನಾಂಡೀಸ್, ಅಲ್ಲಾವುದ್ದೀನ್ ಚಮನಸಾಬ್ ನದಾಫ್, ಚಾಂದಸಾಬ್ ಕಿಲ್ಲೇದಾರ್, ಮಹಮ್ಮದ್ ಸಾದೀಕ್ ಸಂಪಗಾಂವಕರ್, ಅಶೋಕ್ ನಾಯ್ಕ, ಧ್ಯಾನೇಶ್ವರ.ಎಂ.ಗಾಂವಕರ, ಜೇಮ್ಸ್ ಕಲಕೋಟಿ, ಅಯೂಬ್ ಖಾನ್, ಮೋಜಸ್ ಇಸಾ, ಅನಿಲ್.ಕೆ.ಜಕನಾಚೆ ಮೊದಲಾದವರು ಉಪಸ್ಥಿತರಿದ್ದರು.