ಜೋಯಿಡಾ:ರಾಮನಗರದ ಕಲ್ಲು ಕ್ವಾರಿಗಳಿಗೆ ಆರ್.ವಿ.ದೇಶಪಾಂಡೆ ಭೇಟಿ : ವರದಿ ನೀಡಲು ತಹಶೀಲ್ದಾರರಿಗೆ ಸೂಚನೆ

ಜೋಯಿಡಾ : ತಾಲ್ಲೂಕಿನ ರಾಮನಗರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಆರು ಕಲ್ಲು ಕ್ವಾರಿಗಳು ಪರಿಸರ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸುತ್ತಿದ್ದು, ಈ ಕಲ್ಲು ಕ್ವಾರಿಗಳಿಂದ ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿ ನಡೆಯುತ್ತಿರುವ ಕಲ್ಲು ಕ್ವಾರಿಗಳ ಬಗ್ಗೆ ಅಧ್ಯಯನ ನಡೆಸಿ ಪರಿಸರ ಹಾಗೂ ಸ್ಥಳೀಯರ ಆರೋಗ್ಯದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ವರದಿ ಸಿದ್ಧಪಡಿಸುವಂತೆ ಶಾಸಕ ಆರ್.ವಿ.ದೇಶಪಾಂಡೆಯವರು ತಹಸೀಲ್ದಾರ್ ಅವರಿಗೆ ಆದೇಶಿಸಿದ್ದಾರೆ.

ರಾಮನಗರದ ಕಲ್ಲು ಕ್ವಾರಿಗಳಿಗೆ ಶಾಸಕ ಆರ್.ವಿ.ದೇಶಪಾಂಡೆಯವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಮನಗರದಲ್ಲಿ ಒಟ್ಟು 8 ಕಲ್ಲು ಕ್ವಾರಿಗಳಿದ್ದು, ಆರು ಕ್ವಾರಿಗಳು ನಡೆಯುತ್ತಿವೆ. ಸುರಂಗ ಸ್ಫೋಟದಿಂದಾಗಿ ರಾಮನಗರದ ಮನೆಗಳು ಬಿರುಕು ಬೀಳುತ್ತಿವೆ. ಇದರಿಂದ ಮನೆ ಹಾಗೂ ಮನೆಗಳ‌ ಮೇಲ್ಚಾವಣಿ ಶೀಟ್ ಗಳಿಗೆ ಹಾನಿಯಾಗುತ್ತಿದೆ. ಅದಲ್ಲದೇ ಸುರಂಗ ಸ್ಫೋಟದ ಕಂಪನದಿಂದ ಇಲ್ಲಿನ ಬೋರಿಂಗ್ ಗಳ ನೀರಿನ ಮಟ್ಟವೂ ಕಡಿಮೆಯಾಗುತ್ತಿದೆ. ಹೀಗಾಗಿ ಇಲ್ಲಿನ ಜನರು ನೀರಿನ ಕೊರತೆ ಎದುರಿಸುತ್ತಿದ್ದಾರೆ. ಈ ಸ್ಪೋಟದಿಂದಾಗಿ ಗಾಳಿಯಲ್ಲಿ ದೂಳಿನ ಕಣಗಳು ಹರಡುತ್ತಿದ್ದು, ಇದರಿಂದ ಈ ಭಾಗದ ಗ್ರಾಮಸ್ಥರ ಆರೋಗ್ಯಕ್ಕೆ ಅಪಾಯ ಎದುರಾಗಿದೆ. ಆದ್ದರಿಂದ ಈ ಎಲ್ಲಾ ಕಲ್ಲು ಕ್ವಾರಿಗಳ ಬಗ್ಗೆ ತನಿಖೆ ನಡೆಸಿ ಅವರಿಗೆ ನೀಡಿರುವ ಪರವಾನಿಗೆ ರದ್ದುಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅದರಂತೆ ಶಾಸಕ ಆರ್.ವಿ.ದೇಶಪಾಂಡೆ ಕಲ್ಲು ಕ್ವಾರಿಗಳ ಪರಿಶೀಲನೆ ನಡೆಸಿ ಸೂಕ್ತ ತನಿಖೆಗೆ ಆದೇಶಿಸಿದ್ದಾರೆ.

ಇದೇ ಸಂದರ್ಭದಲ್ಲಿ ಜೋಯಿಡಾ ತಾಲ್ಲೂಕಿನಲ್ಲಿ ಹೊಸ ಕಲ್ಲು ಕ್ವಾರಿಗಳಿಗೆ ಅವಕಾಶ ನೀಡದಂತೆ ಹಾಗೂ ಪರವಾನಿಗೆ ಅವಧಿ ಮುಗಿದಿರುವ ಕಲ್ಲು ಕ್ವಾರಿಗಳ ಪರವಾನಿಗೆಯನ್ನು ನವೀಕರಿಸದಂತೆ ಆರ್.ವಿ.ದೇಶಪಾಂಡೆಯವರು ತಹಸೀಲ್ದಾರ್ ಬಸವರಾಜ.ಟಿ ಅವರಿಗೆ ಸೂಚನೆ ನೀಡಿದ್ದಾರೆ.

ಈ ಕಲ್ಲು ಕ್ವಾರಿಗಳ ಕುರಿತು ತಹಸೀಲ್ದಾರ್, ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಕಂದಾಯ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಇನ್ನೆರಡು ದಿನಗಳಲ್ಲಿ ವರದಿ ಸಿದ್ಧಪಡಿಸಬೇಕು ಎಂದು ಶಾಸಕ ಆರ್.ವಿ.ದೇಶಪಾಂಡೆ ತಹಸೀಲ್ದಾರ್‌ಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜೋಯಿಡಾ ತಹಸೀಲ್ದಾರ್ ಬಸವರಾಜ.ಟಿ, ಸಿಪಿಐ ನಿತ್ಯಾನಂದ ಪಂಡಿತ, ಕಂದಾಯ ಇಲಾಖೆ ಅಧಿಕಾರಿಗಳು, ರಾಮನಗರ ಗ್ರಾಮ ಪಂಚಾಯತ ಅಧಿಕಾರಿಗಳು ಉಪಸ್ಥಿತರಿದ್ದರು.