ನಾಗ್ಪುರದಲ್ಲಿ ತನ್ನ ದೊಡ್ಡ ಹೊಟ್ಟೆಯ ಕಾರಣದಿಂದ ವ್ಯಕ್ತಿಯೊಬ್ಬ ಗರ್ಭಿಣಿಯೆಂದು ಕರೆಸಿಕೊಳ್ಳುತ್ತಿದ್ದ. ಎಲ್ಲರೂ ಈತನನ್ನು ನೋಡಿ ಲೇವಡಿ ಮಾಡುತ್ತಿದ್ದರು. ಆದರೆ ಇತ್ತೀಚಿನ ಪರೀಕ್ಷೆಯಲ್ಲಿ ವ್ಯಕ್ತಿಯ ಅವಳಿ ಒಡಹುಟ್ಟಿದವನು 36 ವರ್ಷಗಳಿಂದ ಹೊಟ್ಟೆಯಲ್ಲಿದ್ದನು ಎಂದು ತಿಳಿದುಬಂದಿದೆ. ನಾಗ್ಪುರದ ಸಂಜು ಭಗತ್ ಅವರು ತೀವ್ರ ಹೊಟ್ಟೆ ಉಬ್ಬರದಿಂದ ಬಳಲುತ್ತಿದ್ದರು ಮತ್ತು ಸ್ಥಳೀಯರಿಂದ ಗರ್ಭಿಣಿ ಎಂದು ಅಡ್ಡಹೆಸರು ಹೊಂದಿದ್ದರು.
ಚಿಕ್ಕಂದಿನಿಂದಲೂ ಸಂಜು ಎಲ್ಲರಂತೆ ಸಣ್ಣ ಹೊಟ್ಟೆಯನ್ನು ಹೊಂದಿದ್ದರು. ಆದ್ರೆ ಇಪ್ಪತ್ತು ವರ್ಷ ವಯಸ್ಸಾಗುತ್ತಾ ಹೋದಂತೆ ಹೊಟ್ಟೆಯ ಗಾತ್ರ ಬೆಳೆಯುತ್ತಾ ಹೋಯಿತು. ಆರಂಭದಲ್ಲಿ ಸಂಜು ಇದನ್ನು ದೊಡ್ಡ ಸಮಸ್ಯೆಯಾಗಿ ಪರಿಗಣಿಸಿರಲ್ಲಿಲ್ಲ. ಆದರೆ ನಂತರ ಹೊಟ್ಟೆಯ ಗಾತ್ರ ದೊಡ್ಡದಾಗುತ್ತಾ ಹೋದಂತೆ ಉಸಿರಾಡುವುದು ಸಹ ಕಷ್ಟವಾಗಲು ಶುರುವಾಯಿತು. ಹೀಗಾಗಿ ಕೂಡಲೇ ಅವರು ಮುಂಬೈನ ಆಸ್ಪತ್ರೆಯತ್ತ ಧಾವಿಸಿದರು. ಆಸ್ಪತ್ರೆಯ ವೈದ್ಯರು ಆರಂಭದಲ್ಲಿ ಸಂಜು ಭಗತ್ ಟ್ಯೂಮರ್‌ನಿಂದ ಬಳಲುತ್ತಿದ್ದಾರೆ ಎಂದು ಭಾವಿಸಿದರು. ಆದರೆ ಸರ್ಜರಿ ಮಾಡಿದ ವೈದ್ಯರು ಹೊಟ್ಟೆಯೊಳಗೆ ಸಂಜುವಿನ ಟ್ವಿನ್ ಇರುವುದನ್ನು ಪತ್ತೆಹಚ್ಚಿದರು.
36 ವರ್ಷದಿಂದಲೂ ಹೊಟ್ಟೆಯೊಳಗಿದ್ದ ಟ್ವಿನ್!
ಸರ್ಜರಿ ಮಾಡುತ್ತಿರುವಾಗ ಆರಂಭದಲ್ಲಿ ಕಾಲು, ನಂತರ ತಲೆ, ಕೂದಲು ಹೀಗೆ ಒಂದೊಂದೇ ದೇಹದ ಭಾಗಗಳು ಹೊರಬಂದವು ಎಂದು ವೈದ್ಯರು ತಿಳಿಸಿದ್ದಾರೆ. ‘ನಾವು ನಿಜವಾಗಿಯೂ ಗಾಬರಿಯಾಗಿದ್ದೆವು. ಮುಂದೇನು ಮಾಡಬೇಕೆಂದು ನಮಗೆ ತಿಳಿಯಲ್ಲಿಲ್ಲ. ನಾವು ಸಂಪೂರ್ಣವಾಗಿ ಗೊಂದಲಕ್ಕೊಳಗಾದೆವು. ಹೊಟ್ಟೆಯೊಳಗೆ ನಿಜವಾಗಿಯೂ ಯಾರೋ ಇದ್ದಾರೆ ಎಂದು ತಿಳಿದು ನಾವು ಮೂರ್ಛೆ ಹೋಗುವುದಷ್ಟೇ ಬಾಕಿಯಿತ್ತು’ ಎಂದು ವೈದ್ಯರು ಹೇಳಿದ್ದಾರೆ. ಅಪರೂಪದಲ್ಲಿ ಅಪರೂಪವಾದ ಈ ಪ್ರಕರಣವನ್ನು ವೈದ್ಯರು ‘ಫೀಟಸ್ ಇನ್ ಫೀಟು’ ಎಂದು ಗುರುತಿಸಿದ್ದಾರೆ. ಇದರಲ್ಲಿ ಒಬ್ಬ ಟ್ವಿನ್ ಹೊಟ್ಟೆಯೊಳಗಡೆ ಇನ್ನೊಬ್ಬ ಟ್ವಿನ್ ಮಗುವಿರುತ್ತದೆ ಎಂದು ತಿಳಿದುಬಂದಿದೆ.