ಇನ್ಪೋಸಿಸ್ ಸಂಸ್ಥಾಪಕಿ ಸುಧಾ ಮೂರ್ತಿ ಅವರ ಉಡುಗೆ ನೋಡಿ ಏರ್‌ಪೋರ್ಟ್ ಅಧಿಕಾರಿಗಳು ಅವರನ್ನು ನಡೆಸಿಕೊಂಡ ರೀತಿ ಬಗ್ಗೆ ಆಗಾಗ್ಗೆ ಹೇಳುತ್ತಿರುತ್ತಾರೆ. ಉಡುಗೆ ನೋಡಿ ಮನುಷ್ಯನನ್ನು ಜಡ್ಜ್ ಮಾಡೋದು ತಪ್ಪು ಅನ್ನೋದು ಸುಧಾ ಮೂರ್ತಿಯವರ ನಂಬಿಕೆ. ಅದನ್ನು ಅನುಮೋದಿಸುವ ಮತ್ತೊಂದು ಶಾರ್ಟ್ ಸೋಷಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗುತ್ತಿದೆ.
ಅನ್ನೋದು ಮೂರು ನಿಮಿಷಗಳ ಶಾರ್ಟ್ ಮೂವಿ. ಫೇಸ್‌ಬುಕ್ ವೀಡಿಯೋಸ್‌ಗೆ ಹೋಗಿ ಸರ್ಚ್ ಮಾಡಿದರೆ ಸಿಗುತ್ತದೆ. ಇದರಲ್ಲಿ ಮಾಡರ್ನ್ ಸೊಸೆ ಮತ್ತು ಹಳೇ ಕಾಲದ ಅತ್ತೆಯ ಕಥೆ ಇದೆ. ಈ ಕಾಲದ ಮಾಡರ್ನ್ ಸೊಸೆಗೆ ಅತ್ತೆ ಚೆಂದದ ಸೀರೆ ಉಡುಗೊರೆಯಾಗಿ ನೀಡುತ್ತಾಳೆ. ಈ ಕಾಲದ ಸೊಸೆಗೆ ಹಳೇ ಕಾಲದ ಅತ್ತೆಯನ್ನು ಕಂಡರೆ ತಾತ್ಸಾರ. ಜೊತೆಗೆ ತಾನು ಮಾಡರ್ನ್, ಅತ್ತೆ ಅಡಗೂಲಜ್ಜಿ, ಆಕೆಗೆ ಏನೂ ತಿಳಿಯದು ಅನ್ನುವ ಮನಸ್ಥಿತಿ. ಅತ್ತೆ ಕೊಡುವ ಗಿಫ್ಟ್ ಅನ್ನು ತಾತ್ಸಾರವಾಗಿ ನೋಡುತ್ತ ಆಕೆ ಹೇಳುವ ಪ್ರತೀ ಮಾತಿಗೂ ಬೇಸರ, ಉಡಾಫೆಯಿಂದ ಪ್ರತಿಕ್ರಿಯಿಸೋ ಆಕೆ ಈ ಕಾಲದ ಹೆಣ್ಮಕ್ಕಳನ್ನು ಪ್ರತಿನಿಧಿಸುತ್ತಾಳೆ. ಚಂದದ ಸೀರೆ ಗಿಫ್ಟ್ ಕೊಟ್ಟ ಅತ್ತೆಗೆ ಇದನ್ನೆಲ್ಲ ನನಗೆ ಕೊಡೋದಕ್ಕೆ ಹೋಗ್ಬೇಡಿ, ನಾನು ಬರೀ ಬ್ರಾಂಡೆಡ್ ಡ್ರೆಸ್ ಮಾತ್ರ ಹಾಕ್ಕೊಳ್ಳೋದು. ನೀವು ನನಗಾಗಿ ಏನನ್ನೂ ಖರೀದಿ ಮಾಡೋದು ಬೇಡ ಅನ್ನುವ ಮಾತು ಹೇಳಿ ಅತ್ತೆಯನ್ನು ನೋಯಿಸುತ್ತಾಳೆ.
ಕೆಲಸದವಳು ಬಂದಿರೋದಿಲ್ಲ. ಮನೆ ಕೆಲಸ ಎಲ್ಲ ಮನೆಯವರ ಮೇಲೆ ಬಿದ್ದಿರುತ್ತೆ. ಕೆಲಸ ಮಾಡಿ ಮಾಡಿ ಸುಸ್ತಾದ ವಯಸ್ಸಾದ ಆ ಅತ್ತೆ ತನ್ನ ಸೊಸೆಯ ಸಹಾಯ ಕೇಳುತ್ತಾಳೆ. ಆದರೆ ಸೊಸೆ ತಾನು ವರ್ಕಿಂಗ್ ವುಮನ್. ತನಗೆ ತನ್ನದೇ ಆದ ಟೆನ್ಶನ್‌ಗಳಿರುತ್ತವೆ. ಹೀಗೆಲ್ಲ ಮನೆ ಕೆಲಸ ಮಾಡೋದನ್ನೆಲ್ಲ ತಾನು ಮಾಡಲ್ಲ ಅಂತ ಹೇಳ್ತಾಳೆ. ಜೊತೆಗೆ, ‘ಅನ್ ಎಜುಕೇಟೆಡ್ ಆಗಿರೋ ನಿಮಗೆ ವರ್ಕಿಂಗ್ ವುಮನ್ ಟೆನ್ಶನ್ಸ್ ಗೊತ್ತಾಗಲ್ಲ’ ಅನ್ನೋ ಮಾತನ್ನೂ ಹೇಳ್ತಾಳೆ. ಸೊಸೆಯನ್ನು ನೋಡುವಷ್ಟು ನೋಡಿ, ಆಕೆಯ ಮಾತುಗಳನ್ನು ಕೇಳುವಷ್ಟು ಕೇಳಿದ ಅತ್ತೆ, ಕೊನೆಯಲ್ಲಿ ಸತ್ಯ ಬಾಯಿ ಬಿಡುತ್ತಾಳೆ. ‘ತಾನೂ ಐಐಟಿ ಪದವೀಧರೆ. ಹತ್ತಾರು ದೇಶಗಳನ್ನು ಸುತ್ತಿದ್ದೇನೆ. ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ನಾವು ನಮ್ಮ ಬೇರುಗಳನ್ನು ಮರೆಯಬಾರದು’ ಎನ್ನುತ್ತಾರೆ.
ಕೇವಲ ಉಡುಗೆ ತೊಡುಗೆ ಆಕೆ ಮಾಡುತ್ತಿದ್ದ ಕೆಲಸದಿಂದ ತನ್ನ ಅತ್ತೆ ಕಡಿಮೆ ಓದಿದವಳು ಅಂದುಕೊಂಡಿದ್ದ ಸೊಸೆಗೆ ಈ ಮಾತು ಕೇಳಿ ಶಾಕ್ ಆಗುತ್ತೆ. ‘ನೀವು ಐಐಟಿ ಪದವೀಧರೆಯಾ?’ ಅಂತ ಆಕೆ ಮತ್ತೆ ಮತ್ತೆ ಕೇಳುತ್ತಾಳೆ. ಹೌದು ಅಂತ ತಲೆ ಆಡಿಸೋ ಅತ್ತೆ, ನಾವು ಹೇಗೆ ನಮ್ಮ ರೂಟ್‌ಗಳನ್ನು ಮರೆಯಬಾರದು ಅನ್ನೋದರ ಬಗ್ಗೆ ಸೊಸೆಗೆ ತಿಳಿವಳಿಕೆ ನೀಡುತ್ತಾರೆ.
ನಾನು ಉದ್ಯೋಗಸ್ಥೆ ಮನೆ ಕೆಲಸ ಮಾಡೋದಿಲ್ಲ. ನಮಗೆ ಹೊರಗಿನ ಕೆಲಸವೇ ಸಾಕಷ್ಟಿರುತ್ತದೆ ಅನ್ನೋರು ಈ ಕಾಲದಲ್ಲಿ ಸಾಕಷ್ಟು ಜನರಿದ್ದಾರೆ. ಅದರಲ್ಲೂ ಗಂಡಸರ ಸಂಖ್ಯೆ ಹೆಚ್ಚೇ ಇದೆ. ಆದರೆ ಇಂದ್ರ ನೂಯಿ ತನ್ನ ತಾಯಿ ಹೇಳಿದ ಮಾತನ್ನು ಒಂದು ಕಡೆ ಉಲ್ಲೇಖಿಸಿದ್ದರು. ‘ನೀನು ಪೆಪ್ಸಿಯಂಥಾ ಕಂಪನಿಯ ಸಿಇಓ. ವಿಶ್ವದ ಪ್ರತಿಷ್ಠಿತ ವ್ಯಕ್ತಿ ಅನ್ನೋದನ್ನೆಲ್ಲ ಕಾರ್ ಪಾರ್ಕಿಂಗ್ ಜಾಗದಲ್ಲೇ ಬಿಟ್ಟು ಬಾ. ಈ ಮನೆಯೊಳಗೆ ಬಂದಾಗ ನೀನು ಈ ಮನೆಯ ಮಗಳು ಅಷ್ಟೇ’ ಅಂತ.
ನಾವು ಆಕಾಶಕ್ಕೆ ಏಣಿ ಹಾಕಿದರೂ. ಏಣಿ ನಿಲ್ಲೋದು ಭೂಮಿಯ ಸಪೋರ್ಟಿಂದಲೇ ಅಲ್ವಾ? ಆಕಾಶದೆತ್ತರಕ್ಕೆ ಏರಿದ ಮೇಲೆ ಅಲ್ಲೇ ಇರಲು ಹೇಗೆ ಸಾಧ್ಯ, ಕೆಳಗೆ ಇಳಿಯಲೇ ಬೇಕು. ಭೂಮಿಯಲ್ಲೇ ಬದುಕಬೇಕು. ಹೀಗಿರುವಾಗ ಆ ಕೆಲಸ ಮೇಲು, ಈ ಕೆಲಸ ಕೀಳು ಅನ್ನೋ ಮೈಂಡ್‌ಸೆಟ್ ಬಿಟ್ಟು ನಮ್ಮ ಕೆಲಸ ನಾವು ಮಾಡ್ತಾ ಹೋಗ್ಬೇಕು, ಬೇರುಗಳನ್ನು ಬಿಡಬಾರದು ಅನ್ನೋ ಸಂದೇಶವನ್ನು ಈ ಮೂರು ನಿಮಿಷಗಳ ಕಿರುಚಿತ್ರನೀಡುತ್ತದೆ.