6 ದಿನಕ್ಕೆ ಆದಿಪುರುಷ ಗಳಿಸಿದ್ದು 419 ಕೋಟಿ ರೂ.: ಚಿತ್ರತಂಡವೇ ಅಧಿಕೃತ ಮಾಹಿತಿ

ಭಾರೀ ವಿವಾದ ಮತ್ತು ಬ್ಯಾನ್ ನಡುವೆಯೂ ಆದಿ ಪುರುಷ ಸಿನಿಮಾ 6 ದಿನದಲ್ಲಿ ಬರೋಬ್ಬರಿ 419 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಸ್ವತಃ ಚಿತ್ರತಂಡವೇ ಘೋಷಣೆ ಮಾಡಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಅದು ಪೋಸ್ಟರ್ ವೊಂದನ್ನು ಹಂಚಿಕೊಂಡಿದೆ. ವಿವಾದ, ಬ್ಯಾನ್ ಏನೇ ಇದ್ದರೂ ಉತ್ತಮ ಗಳಿಕೆಯನ್ನೇ ಸಿನಿಮಾ ತಂದುಕೊಟ್ಟಿದೆ.

ಮೊದಲ ದಿನವೇ ಸಿನಿಮಾ 140 ಕೋಟಿ ರೂಪಾಯಿ ಆದಾಯ ತಂದುಕೊಟ್ಟಿದ್ದರೆ, 2ನೇ ದಿನ 240 ಕೋಟಿ, 3ನೇ ದಿನ 34 ಕೋಟಿ, 4ನೇ ದಿನ 35 ಕೋಟಿ ರೂಪಾಯಿ, 5ನೇ ದಿನ 20 ಕೋಟಿ ರೂಪಾಯಿ ಹಾಗೂ 6ನೇ ದಿನ 15 ಕೋಟಿ ರೂಪಾಯಿಯನ್ನು ಬಾಕ್ಸ್ ಆಫೀಸಿನಲ್ಲಿ ಆದಿ ಪುರುಷ ಕಮಾಯಿ ಮಾಡಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ನಡುವೆ ಇಂದಿನಿಂದ ಟಿಕೆಟ್ ದರವನ್ನೂ ಚಿತ್ರತಂಡ ಇಳಿಸಿದೆ. ತ್ರಿಡಿ ಸಿನಿಮಾವನ್ನು ಕೇವಲ 150 ರೂಪಾಯಿಯಲ್ಲಿ ನೋಡಬಹುದು ಎಂದು ಘೋಷಣೆ ಮಾಡಿದೆ. ಮೂರನೇ ದಿನದಿಂದ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಭಾರೀ ಇಳಿಮುಖ ಕಂಡಿದ್ದರಿಂದ ಟಿಕೆಟ್ ದರವನ್ನು ಇಳಿಸುವ ಮೂಲಕ ಮತ್ತೆ ಚೇತರಿಕೆ ಕಾಣುವ ಕನಸು ಕಂಡಿದೆ.

ಈ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ವಿಷ್ಣು ಗುಪ್ತಾ ಎನ್ನುವವರು ದೆಹಲಿ ಹೈಕೋರ್ಟ್ ಗೂ ಮೊರೆ ಹೋಗಿದ್ದಾರೆ. ನಿನ್ನೆ ಅರ್ಜಿಯನ್ನು ಕೈಗೆತ್ತಿಕೊಂಡಿರುವ ನ್ಯಾಯಾಧೀಶರು ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಿದ್ದಾರೆ. ಸಿನಿಮಾ ರಿಲೀಸ್ ಆಗಿರುವುದರಿಂದ ಆತುರದ ವಿಚಾರಣೆ ಮಾಡುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.