ಮೊಬೈಲ್​ಭೂತ; ನಿದ್ದೆಯಲ್ಲೂ ಅಳುತ್ತ ​ಸ್ಕ್ರೀನ್ ಮೇಲೆ ಬೆರಳಾಡಿಸುತ್ತಿರುವ ಚೀನಾದ ಮಗು

China : ಚೀನಾ ಒಳಗೊಂಡಂತೆ ಏಷ್ಯಾದ ಕೆಲ ದೇಶಗಳಲ್ಲಿರುವ ಮಕ್ಕಳು ದಿನಕ್ಕೆ ಎರಡು ತಾಸಿಗಿಂತ ಹೆಚ್ಚಾಗಿ ಮೊಬೈಲ್​, ಟ್ಯಾಬ್ಲೆಟ್​ನೊಂದಿಗೆ ಕಳೆಯುತ್ತಿವೆ. ಹೊರಾಂಗಣ ಚಟುವಟಿಕೆಯಿಂದ ದೂರವಿದ್ದು ಮಾನಸಿಕ ಅಸ್ವಸ್ಥತೆಗೆ ಒಳಗಾಗುತ್ತಿವೆ.

ಊಟ ಮಾಡುತ್ತಿಲ್ಲವಾ? ಮೊಬೈಲ್​ ತೋರಿಸಿಬಿಡಿ. ತುಂಬಾ ಹಠ ಮಾಡುತ್ತಿದೆಯಾ ಕೈಗೆ ಮೊಬೈಲ್ ಕೊಟ್ಬಿಡಿ. ತುಂಬಾ ಅಳುತ್ತಿದೆಯಾ? ಮೊಬೈಲ್​ ಮುಖಕ್ಕೆ ಹಿಡಿಯಿರಿ. ಕೆಲಸಗಳಿಗೆ ತೊಂದರೆ ಮಾಡುತ್ತಿದೆಯಾ? ಮೊಬೈಲ್ ಕೊಟ್ಟು ತಾಸುಗಟ್ಟಲೆ ಕೂರಿಸಿಬಿಡಿ. ಎಷ್ಟೊಂದು ಸುಲಭ ಉಪಾಯ ಇದೆಯಲ್ಲವಾ ಈಗೀಗ ಮಕ್ಕಳನ್ನು ಸುಮ್ಮನಿರಿಸಲು? ಕಂಕುಳಲ್ಲಿ ಎತ್ತಿಕೊಂಡು ಓಣಿಓಣಿ ತಿರುಗಿ ಗುಬ್ಬಿ, ಕಾಗೆ, ಹಸು, ನಾಯಿ ಎಮ್ಮೆ ತೋರಿಸುವ ಕಾಲ ಇದಲ್ಲ. ಏನಿದ್ದರೂ ಅಂಗೈಯಲ್ಲೇ ಅರಮನೆಯನ್ನು ಕಟ್ಟುವ ಕಾಲ ಮತ್ತು ಅದರ ಕರ್ಮವನ್ನು ಈ ಜನ್ಮದಲ್ಲಿಯೇ ಅನುಭವಿಸುವಂಥ ಅವಕಾಶ. ನೋಡಿ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ.

ಈ ಮಗು ಮೊಬೈಲ್​ ಚಟಕ್ಕೆ ಅಧೀನವಾಗಿದೆ. ಪರಿಣಾಮವಾಗಿ ನಿದ್ದೆಯಲ್ಲಿಯೂ ಅದು ಮೊಬೈಲ್​ ಬಳಕೆ ಮಾಡುತ್ತಿದೆ. ನಡುನಡುವೆ ಅಳುತ್ತಿದೆ. ಈ ವಿಡಿಯೋ ನೋಡಿದ ಇದರ ತಂದೆತಾಯಿ ಆತಂಕಕ್ಕೆ ಒಳಗಾಗಿದ್ದಾರೆ. ಈತನಕ ಇದನ್ನು ಸುಮಾರು 16 ಮಿಲಿಯನ್​ ಜನರು ನೋಡಿದ್ದಾರೆ. 8,000ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಲಕ್ಷಾಂತರ ಜನರು ಈ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಿದ್ದಾರೆ. ಹೌದು, ಇದು ಯಾರಿಗೂ ಆತಂಕ ತರುವ ವಿಷಯವೇ.

ದಿನಕ್ಕೆ 2 ಗಂಟೆಗಳ ಸ್ಕ್ರೀನ್​ ಟೈಮ್ ಸಾಕು. ಆದರೆ ಚೀನಾದಂತಹ ಕೆಲವು ಏಷಿಯಾದ ದೇಶಗಳಲ್ಲಿಯೂ  ಅದರಲ್ಲೂ ಮಕ್ಕಳ ವಿಷಯವಾಗಿ ಇದು ಗಡಿಯನ್ನು ಮೀರುತ್ತಿದೆ. ಇಲ್ಲಿ ಮಕ್ಕಳು ಉದ್ಯಾನವನ ಮತ್ತು ಆಟದ ಮೈದಾನಗಳನ್ನು ಪ್ರವೇಶಿಸುವುದು ದುರ್ಲಭವಾಗಿದೆ. ಹಾಗಾಗಿ ಮಕ್ಕಳ ಮನರಂಜನೆಗಾಗಿ ಪೋಷಕರು ಟ್ಯಾಬ್ಲೆಟ್ ಮೇಲೆ ಅವಲಂಬಿಸಿದ್ದಾರೆ. ನಾನು ಚೀನಾಕ್ಕೆ ಹೋದಾಗ ಇದನ್ನು ಗಮನಿಸಿದೆ ಎಂದು ಒಬ್ಬರು ಹೇಳಿದ್ದಾರೆ.

ಖಂಡಿತ ಈ ಮಗು ಕೂಡ ಟಿಕ್​ ಟಾಕ್​, ಶಾರ್ಟ್ಸ್​ ವಿಡಿಯೋ ಅನ್ನೇ ನಿದ್ದೆಯಲ್ಲಿಯೂ ನೋಡುತ್ತಿದೆ. ಈಗೀಗ ಎಲ್ಲ ಮಕ್ಕಳು ಇವುಗಳ ದಾಸರಾಗಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಮಕ್ಕಳ ಸಮಗ್ರ ಅಭಿವೃದ್ಧಿಗೆ ಹೊರಾಂಗಣ ಚಟುವಟಿಕೆಗಳು ಅತ್ಯಂತ ಅವಶ್ಯ ಎನ್ನುವುದನ್ನು ಪೋಷಕರು ಮನಗಾಣಬೇಕಿದೆ.