ಗೋವಿನ ಮೇಲಿನ ನಂಬಿಕೆಗೂ ಸಂವಿಧಾನಕ್ಕೂ ವ್ಯತ್ಯಾಸ ಇದೆ: ಜಿ ಪರಮೇಶ್ವರ್

ತುಮಕೂರು: ಜನೋಪಕಾರಿ ಅಲ್ಲದ ಗೋಹತ್ಯೆ ನಿಷೆಧ ಹಾಗೂ ಮತಾಂತರ ನಿಷೇಧ ಕಾಯಿದೆಯನ್ನು ವಾಪಸ್ ಪಡೆಯುವುದಾಗಿ ಗೃಹ ಸಚಿವ ಜಿ ಪರಮೇಶ್ವರ್ ಪುನರುಚ್ಚರಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋವಿನ ಮೇಲೆ ಇರುವ ನಂಬಿಕೆ, ಪ್ರೀತಿಗೂ, ಸಂವಿಧಾನಕ್ಕೂ ವ್ಯತ್ಯಾಸ ಇದೆ. ಆರ್ಥಿಕತೆಯೇ ಬೇರೆ, ನಂಬಿಕೆಯೇ ಬೇರೆ. ಹೀಗಾಗಿ ಈ ಎರಡೂ ಕಾನೂನನ್ನು ರದ್ದುಗೊಳಿಸುತ್ತೇವೆ ಎಂದಿದ್ದಾರೆ.

ಅನ್ನ ಭಾಗ್ಯ ಯೋಜನೆ ಕುರಿತಂತೆ ಮಾತನಾಡಿದ ಪರಮೇಶ್ವರ್, ಈಗಾಗಲೇ ಸಿಎಂ ಸಿದ್ದರಾಮಯ್ಯ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಏನು ಮಾತುಕತೆಯಾಗಿದೆ ಎಂಬುದು ಗೊತ್ತಿಲ್ಲ. ಯಾವುದೋ ಮುಲಾಜಿಗೆ ಕೇಂದ್ರ ಅಕ್ಕಿಕೊಡುತ್ತಿಲ್ಲ. ಪ್ರತಿ ರಾಜ್ಯಕ್ಕೆ ಕೊಟ್ಟಂತೆ ಕರ್ನಾಟಕಕ್ಕೂ ಕೊಡುತ್ತಿದೆ. ಕೇಂದ್ರ ಕೊಟ್ಟ 5 ಕೆಜಿ ಸೇರಿಸಿ ಒಟ್ಟು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ನಡುವೆ ಬಿಜೆಪಿ ಸಾಧನಾ ಸಮಾವೇಶ ಕುರಿತಂತೆ ಮಾತನಾಡಿದ ಅವರು, ಬಿಜೆಪಿಯವರು ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಮಾಡುತ್ತಿದ್ದಾರೆ? 40% ಕಮಿಷನ್ ಪಡೆದಿದ್ದು, 15 ಲಕ್ಷ ರೂ. ಖಾತೆಗೆ ಹಾಕ್ತಿನಿ ಅಂದಿದ್ದು ಸಾಧನೆನಾ ಎಂದು ವ್ಯಂಗ್ಯವಾಡಿದ್ದಾರೆ.