ಎಂಎಸ್ ಧೋನಿ ಟೀಂ ಇಂಡಿಯಾದ ಶ್ರೇಷ್ಠ ನಾಯಕರಲ್ಲಿ ಒಬ್ಬರು . ಭಾರತಕ್ಕೆ ಮೂರು ಐಸಿಸಿ ಪ್ರಶಸ್ತಿ ತಂದುಕೊಟ್ಟ ನಾಯಕನೆಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ. ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ 2007 ಟಿ20 ವಿಶ್ವಕಪ್, 2011 ಏಕದಿನ ವಿಶ್ವಕಪ್, ಮತ್ತು 2013 ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತ್ತು.
ಇದರೊಂದಿಗೆ ಧೋನಿ ನಾಯಕತ್ವದಲ್ಲೇ ಟೀಂ ಇಂಡಿಯಾಕ್ಕೆ ಹಲವು ಸೂಪರ್ ಸ್ಟಾರ್ಗಳು ಸಿಕ್ಕಿದರು ಎಂಬ ಮಾತುಗಳು ಕೇಳಿಬರುತ್ತವೆ. ಹಾಗೆಯೇ ಧೋನಿಯ ಆಗಮನದಿಂದ ತಂಡದ ಹಲವು ಹಿರಿಯ ಆಟಗಾರರು ತಮ್ಮ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದರು ಎನ್ನಲಾಗುತ್ತದೆ.
ಇವೆಲ್ಲವುಗಳ ನಡುವೆ ಧೋನಿ ಈ ಮೂವರು ಪ್ರತಿಭಾವಂತ ಕ್ರಿಕೆಟಿಗರ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಳ್ಳಲ್ಲಿಲ್ಲ ಎಂಬುದು ಸತ್ಯಕ್ಕೆ ಸನಿಹವಾಗಿದೆ. ಧೋನಿ ತಮ್ಮ ನಾಯಕತ್ವದಲ್ಲಿ ಕೆಲವೇ ಕೆಲವು ಅವಕಾಶ ಪಡೆದು ಆ ಬಳಿಕ ತಂಡದಿಂದ ದೂರದ ಆ ಮೂವರು ಕ್ರಿಕೆಟಿಗರು ಯಾರು ಎಂಬುದನ್ನು ನೋಡುವುದಾದರೆ..
ಮನೋಜ್ ತಿವಾರಿ: 2008 ಮತ್ತು 2015 ರ ನಡುವೆ ಆಡಿದ 12 ಏಕದಿನ ಪಂದ್ಯಗಳಲ್ಲಿ ಒಂದು ಶತಕ ಮತ್ತು ಒಂದು ಅರ್ಧಶತಕ ಸಿಡಿಸಿದ್ದ ಮನೋಜ್ ತಿವಾರಿ ತಂಡದಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯಲಿಲ್ಲ. ಮಹೇಂದ್ರ ಸಿಂಗ್ ಧೋನಿ ಅಡಿಯಲ್ಲಿ ಇತರ ಕೆಲವು ಬ್ಯಾಟರ್‌ಗಳಿಗೆ ಹೋಲಿಸಿದರೆ ತಿವಾರಿ ಹೆಚ್ಚು ಅವಕಾಶವನ್ನು ಪಡೆಯಲಿಲ್ಲ ಎಂಬುದು ಸಾರ್ವಜನಿಕವಾಗಿ ಕೇಳಿಬಂದ ಮಾತಾಗಿದೆ.
ಇರ್ಫಾನ್ ಪಠಾಣ್: ಭಾರತ 2007 ರ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದವರಲ್ಲಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಕೂಡ ಒಬ್ಬರು. ಆದರೆ ಅವರನ್ನು ಅನ್ಯಾಯವಾಗಿ ಭಾರತ ತಂಡದಿಂದ ಹೊರಹಾಕಲಾಯಿತು. ಪಠಾಣ್ 2012 ರಲ್ಲಿ ಭಾರತಕ್ಕಾಗಿ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದಾಗ ಅವರಿಗೆ ಕೇವಲ 28 ವರ್ಷ ವಯಸ್ಸಾಗಿತ್ತು.
ಆ ಬಳಿಕ 2013 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಇರ್ಫಾನ್ ಪಠಾಣ್ ತಂಡದಲ್ಲಿ ಆಯ್ಕೆಯಾಗಿದ್ದರು. ಆದರೆ ಸ್ವಿಂಗ್ ಬೌಲಿಂಗ್‌ಗೆ ಪಠಾಣ್ ಹೆಸರುವಾಸಿಯಾಗಿದ್ದರೂ ಆಶ್ಚರ್ಯಕರವಾಗಿ ಅವರನ್ನು ಪಂದ್ಯಾವಳಿಯಲ್ಲಿ ಆಡಿಸಲಿಲ್ಲ. ಆ ಬಳಿಕ ಐಪಿಎಲ್ನಲ್ಲಿ ಕಾಣಿಸಿಕೊಂಡ ಪಠಾಣ್ 2015 ರಲ್ಲಿ ಚೆನ್ನೈ ಮತ್ತು 2016 ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಜೊತೆಗೆ ಧೋನಿ ನೇತೃತ್ವದಲ್ಲಿ ಹೆಚ್ಚಿನ ಐಪಿಎಲ್ ಸೀಸನ್ ಆಡಿದರೂ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ.
ವರ್ಷಗಳ ನಂತರ, ತನಗಾದ ಅನ್ಯಾಯದ ಬಗ್ಗೆ ಮೌನ ಮುರಿದಿದ್ದ ಇರ್ಫಾನ್ ಪಠಾಣ್, ಟ್ವಿಟ್ಟರ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಪರೋಕ್ಷವಾಗಿ ವ್ಯಂಗ್ಯವಾಡಿದ್ದರು. “ವಯಸ್ಸು ಕೆಲವರಿಗೆ ಕೇವಲ ಒಂದು ಸಂಖ್ಯೆ ಮತ್ತು ಇತರರಿಗೆ ಕೈಬಿಡಲು ಒಂದು ಕಾರಣ…” ಎಂದು ಬರೆದು ಅಸಮಾಧಾನ ಹೊರಹಾಕಿದ್ದರು.
ರಾಬಿನ್ ಉತ್ತಪ್ಪ: ಟೀಂ ಇಂಡಿಯಾದ ತುಂಬಾ ಸ್ಟೈಲಿಶ್ ಮತ್ತು ಆಕ್ರಮಣಕಾರಿ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪಗೂ ತಂಡದಲ್ಲಿ ಹೆಚ್ಚಿನ ಅವಕಾಶ ಸಿಗಲಿಲ್ಲ 2007ರ ಟಿ20 ವಿಶ್ವಕಪ್ ಹಾಗೂ 2008 ರಲ್ಲಿ ಆಸೀಸ್ ವಿರುದ್ಧ ಸರಣಿ ಆಡಿದ್ದ ಉತ್ತಪ್ಪರನ್ನು ನಂತರ ಬೆಂಚ್ ಕಾಯಲು ಬಿಡಲಾಯಿತು. ಆ ಬಳಿಕ 2011 ರ ವಿಶ್ವಕಪ್ ತಂಡದಿಂದ ಅವರನ್ನು ಕೈಬಿಡಲಾಯಿತು.
ಉತ್ತಪ್ಪಗೆ 2009 ಮತ್ತು 2013 ರ ನಡುವೆ ಒಂದೇ ಒಂದುಏಕದಿನ ಪಂದ್ಯವನ್ನು ಆಡಲು ಆಗಲಿಲ್ಲ. ನಂತರ ಐಪಿಎಲ್ನಲ್ಲಿ ಕೆಕೆಆರ್ ಪರ ಅದ್ಭುತ ಪ್ರದರ್ಶನ ನೀಡಿದ ಉತ್ತಪ್ಪ2014 ರಲ್ಲಿ ಮತ್ತೆ ಟೀಂ ಇಂಡಿಯಾಕ್ಕೆ ಮರಳಿದರು. ಆದರೆ ಕೆಲವು ಅವಕಾಶಗಳ ನಂತರ, ಅವರನ್ನು ಮತ್ತೆ ತಂಡದಿಂದ ಕೈಬಿಡಲಾಯಿತು.