ಅಂಕೋಲಾ: ಏಕಾಗ್ರತೆಗಾಗಿ ವಿದ್ಯಾರ್ಥಿಗಳು ನಿರಂತರವಾಗಿ ಯೋಗ ಮಾಡಬೇಕು : ಶೋಭಾ ಶೆಟ್ಟಿ


ಅಂಕೋಲಾ: ಚಂಚಲವಾದ ಮನಸ್ಸನ್ನು ಹಿಡಿದಿಟ್ಟುಕೊಂಡು ಶಿಕ್ಷಣದಲ್ಲಿ ಏಕಾಗ್ರತೆಯನ್ನು ಶಾಲಾ ವಿದ್ಯಾರ್ಥಿಗಳು ಪಡೆಯುವುದು ನಿರಂತರವಾಗಿ ಯೋಗ, ಪ್ರಾಣಾಯಾಮ ಮಾಡುವುದರಿಂದ ಸಾಧ್ಯ ಎಂದು ಯೋಗ ಶಿಕ್ಷಕಿ ಶೋಭಾ ಆರ್. ಶೆಟ್ಟಿ ನುಡಿದರು.
ಅವರು ಇತ್ತೀಚೆಗೆ ಸಂಗಮ ಸೇವಾ ಸಂಸ್ಥೆ(ರಿ) ಬಾಳೆಗುಳಿ, ಅಂಕೋಲಾ, ಪತಂಜಲಿ ಯೋಗ ಸಮಿತಿ ಅಂಕೋಲಾ ಹಾಗೂ ಕೆ.ಎಲ್.ಇ. ಸೊಸೈಟಿಯ ಕೌಟುಂಬಿಕ ಸಲಹಾ ಕೇಂದ್ರ ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಸರಕಾರಿ ಪ್ರೌಢಶಾಲೆ ಅಲಗೇರಿಯಲ್ಲಿ ಏರ್ಪಡಿಸಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಮುಖ್ಯಾಧ್ಯಾಪಕಿ ವಿಜಯಲಕ್ಷ್ಮಿ ನಾಯ್ಕ ಮಾತನಾಡಿ, ಯೋಗ ಭಾರತದ ಹೆಮ್ಮೆಯ ಕೊಡುಗೆ. ಇದನ್ನು ಎಲ್ಲರೂ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.
ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸಂಗಮ ಸೇವಾ ಸಂಸ್ಥೆಯ ಅಧ್ಯಕ್ಷ ರವೀಂದ್ರ ಎನ್. ಶೆಟ್ಟಿ ಸ್ವಾಗತಿಸಿದರು. ದೈಹಿಕ ಶಿಕ್ಷಕ ದೇವರಾಯ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೌಟುಂಬಿಕ ಸಲಹೆಗಾರ ತಿಮ್ಮಣ್ಣ ಭಟ್ ಬಿ. ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ವಿನಾಯಕ ನಾಯ್ಕ ವಂದಿಸಿದರು.
ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಸಮಿತಿಯ ನಾಗವೇಣಿ ನಾಯ್ಕ ಹಾಗೂ ಸ್ಥಳೀಯ ಶಾಲಾ ಶಿಕ್ಷಕರಾದ ನಾಗರಾಜ ಎಸ್., ಮಹಾಬಲೇಶ್ವರ ಗೌಡ, ಸಂತೋಷ ನಾಯಕ, ಉಮಾ ಕೆಣಿ , ಮಂಜುಳಾ ಗೌಡ ಹಾಗೂ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.