ಪ್ಯಾರಿಸ್: ಫ್ರಾನ್ಸ್ ದೇಶದ ರಾಜಧಾನಿನಗರಿ ಪ್ಯಾರಿಸ್ನಲ್ಲಿ ನಡೆಯುತ್ತಿರುವ ಏರ್ಶೋನದಲ್ಲಿ ಭಾರತದ ಏರ್ ಇಂಡಿಗೋ ಮತ್ತು ಇಂಡಿಗೋ ಏರ್ಲೈನ್ಸ್ ಎಲ್ಲರ ಗಮನ ಸೆಳೆದಿವೆ. ವಿಶ್ವದ ಪ್ರಮುಖ ವಿಮಾನ ತಯಾರಕರಾದ ಏರ್ಬಸ್ ಮತ್ತು ಬೋಯಿಂಗ್ ಕಂಪನಿಗಳಿಗೆ ಭಾರತದ ಈ ಸಂಸ್ಥೆಗಳು ಒಳ್ಳೆಯ ಬ್ಯುಸಿನೆಸ್ ನೀಡಿವೆ. ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯ ಸಂಸ್ಥೆ 470 ವಿಮಾನಗಳನ್ನು ಖರೀದಿಸಲು ಏರ್ಬಸ್ ಮತ್ತು ಬೋಯಿಂಗ್ ಕಂಪನಿಗಳೊಂದಿಗೆ ಜೂನ್ 21ರಂದು ಸಹಿ ಹಾಕಿದೆ. ಅದಕ್ಕೆ ಮುನ್ನ ಇಂಡಿಗೋ ಏರ್ಲೈನ್ಸ್ ಸಂಸ್ಥೆ 500 ಏರ್ಬಸ್ ವಿಮಾನಗಳ ಖರೀದಿಗೆ ಮುಂದಾಗಿದೆ. ಇದರೊಂದಿಗೆ ಒಂದೇ ಒಪ್ಪಂದದಲ್ಲಿ ಅತಿಹೆಚ್ಚು ವಿಮಾನ ಖರೀದಿಸಿದ ಭಾರತೀಯ ದಾಖಲೆ ಇಂಡಿಗೋ ಏರ್ಲೈನ್ಸ್ನದ್ದಾಗಿದೆ. ಭಾರತದ ಎರಡು ಕಂಪನಿಗಳು ಸೇರಿ 970 ವಿಮಾನಗಳನ್ನು ಖರೀದಿಸಲು ಮುಂದಾಗಿವೆ. ಪ್ಯಾರಿಸ್ ಏರ್ಶೋನದಲ್ಲಿ ಯಾವುದೇ ದೇಶದಿಂದ ಇಷ್ಟೊಂದು ಪ್ರಮಾಣದಲ್ಲಿ ವಿಮಾನ ಖರೀದಿ ಆಗಿಲ್ಲ. ಆ ಮಟ್ಟಿಗಾದರೂ ಭಾರತದ್ದು ವಿಶ್ವದಾಖಲೆಯೇ.
ವಿಶ್ವದಲ್ಲಿರುವ ಬಹುತೇಕ ಪ್ಯಾಸೆಂಜರ್ ವಿಮಾನಗಳು ಏರ್ಬಸ್ ಮತ್ತು ಬೋಯಿಂಗ್ ಕಂಪನಿಗಳದ್ದೇ ಎಂಬುದು ಇಲ್ಲಿ ಉಲ್ಲೇಖಾರ್ಹ. ಬೋಯಿಂಗ್ ಅಮೆರಿಕದ ಸಂಸ್ಥೆಯಾಗಿದೆ. ಇನ್ನು, ಏರ್ಬಸ್ ಐರೋಪ್ಯ ಖಂಡದ ಸಂಸ್ಥೆ. ಫ್ರಾನ್ಸ್, ಬ್ರಿಟನ್, ಜರ್ಮನಿ ಮತ್ತು ಸ್ಪೇನ್ ಈ ನಾಲ್ಕು ದೇಶಗಳಲ್ಲಿ ಏರ್ಬಸ್ ನೆಲೆ ಇದೆ. ಜಿಇ ಏವಿಯೇಶನ್, ಲಾಕ್ಹೀಡ್ ಮಾರ್ಟಿನ್, ಡಸ್ಸೋ ಏವಿಯೇಶನ್, ಗಲ್ಫ್ಸ್ಟ್ರೀಮ್ ಏರೋಸ್ಪೇಸ್, ಜೋಬಿ ಏವಿಯೇಷನ್, ಸೆಸ್ನಾ ಹೀಗೆ ಹತ್ತಾರು ವಿಮಾನ ತಯಾರಕ ಕಂಪನಿಗಳಿವೆಯಾದರೂ ಪ್ಯಾಸೆಂಜರ್ ಏರ್ಕ್ರಾಫ್ಟ್ ಮಾರುಕಟ್ಟೆಯ ಶೇ. 90ರಷ್ಟು ಪಾಲು ಬೋಯಿಂಗ್ ಮತ್ತು ಏರ್ಬಸ್ಗಳಿಗೆ ಇದೆ.
ಇನ್ನು, ಏರ್ ಇಂಡಿಯಾ ಸಂಸ್ಥೆ ಏರ್ಬಸ್ನಿಂದ 250 ವಿಮಾನ ಹಾಗು ಬೋಯಿಂಗ್ನಿಂದ 220 ವಿಮಾನಗಳಿಗೆ ಆರ್ಡರ್ ಇಟ್ಟಿದೆ. ಫೆಬ್ರುವರಿ ತಿಂಗಳಲ್ಲೇ ಒಪ್ಪಂದ ಕರಡು ರೂಪುಗೊಡಿತ್ತು. ಇದೀಗ ಏರ್ಬಸ್ ಮತ್ತು ಬೋಯಿಂಗ್ ಜೊತೆ ಏರ್ ಇಂಡಿಯಾ ಪ್ರತ್ಯೇಕವಾಗಿ ಒಪ್ಪಂದಕ್ಕೆ ಸಹಿ ಹಾಕಿದೆ. ಏರ್ಬಸ್ನಿಂದ ಪಡೆಯಲಿರುವ 250 ವಿಮಾನಗಳಲ್ಲಿ 210 ಎ320ನಿಯೋ ಮತ್ತು ಎ321ನಿಯೋ ಸಣ್ಣ ವಿಮಾನಗಳಾಗಿವೆ. ದೊಡ್ಡದಾಗಿರುವ 40 ಎ350 ವಿಮಾನಗಳನ್ನು ಏರ್ಬಸ್ನಿಂದ ಪಡೆಯಲಿದೆ.
ಇನ್ನು, ಬೋಯಿಂಗ್ ಜೊತೆ ಮಾಡಿಕೊಂಡ ಒಪ್ಪಂದದ ಪ್ರಕಾರ ಒಟ್ಟು 220 ವಿಮಾನಗಳು ಬರಲಿವೆ. ಇದರಲ್ಲಿ ಸಣ್ಣದಾಗಿರುವ 737 ಮ್ಯಾಕ್ಸ್ನ 190 ವಿಮಾನಗಳಿವೆ. ದೊಡ್ಡದಾಗಿರುವ ಬೇರೆ 30ವಿಮಾನಗಳಿವೆ.
ಇಂಡಿಗೋ ಏರ್ಲೈನ್ಸ್ ಸಂಸ್ಥೆ ಏರ್ಬಸ್ನಿಂದ ಪಡೆಯಲು ಹೊರಟಿರುವ ಎಲ್ಲಾ 500 ವಿಮಾನಗಳು ಸಣ್ಣದಾಗಿರುವ ಎ320 ಫ್ಯಾಮಿಲಿ ಪ್ಲೇನ್ಗಳಾಗಿವೆ. ಇವು ತತ್ಕ್ಷಣಕ್ಕೆ ಸರಬರಾಜು ಆಗುವುದಿಲ್ಲ. 2030 ರಿಂದ 2035ರ ಅವಧಿಯಲ್ಲಿ ಸರಣಿಗಳಾಗಿ ಈ ವಿಮಾನಗಳ ಸರಬರಾಜು ಆಗಲಿದೆ.