ಆರ್.ಬಿ.ಐ ನ ಹಣಕಾಸು ನೀತಿ ಸಮಿತಿ ಸಭೆ: ರೆಪೋ ದರ ಹೆಚ್ಚಳವಾಗುವ ಸಾಧ್ಯತೆ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿ ಸಭೆ ಇಂದಿನಿಂದ ಆರಂಭಗೊಂಡಿದ್ದು, ಇನ್ನೂ ಮೂರು ದಿನಗಳ ಕಾಲ ನಡೆಯಲಿದೆ. ಇದರಿಂದ ರೆಪೋ ದರ ಹೆಚ್ಚಳವಾಗುವ ಸಾಧ್ಯತೆ ಇದೆ.

ಆರ್.ಬಿ.ಐ ಹೆಚ್ಚುತ್ತಿರುವ ಹಣದುಬ್ಬರವನ್ನು ತಗ್ಗಿಸಲು ಪ್ರಯತ್ನಿಸುತ್ತಿದೆ. ಈ ಬಾರಿಯೂ ರೆಪೋ ದರ ಹೆಚ್ಚಳ ಮಾಡುವ ಸಾಧ್ಯತೆ ಎಂದು ಹಣಕಾಸು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ರೆಪೋ ದರ ಪ್ರಮಾಣ ಶೇ. 5.9 ರಷ್ಟಿದ್ದರೂ ಹಣದುಬ್ಬರ ಪ್ರಮಾಣ ಶೇ. 6 ಕ್ಕಿಂತ ಕೆಳಗೆ ತರುವುದು ಆರ್.ಬಿ.ಐ ಗೆ ಸಾಧ್ಯವಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ರೆಪೋ ದರ ಹೆಚ್ಚಳ ಮಾಡುವ ಸಾಧ್ಯತೆಯಿದೆ.

ಇದರಿಂದ ಬ್ಯಾಂಕ್‍ಗಳು ಸಾಲ ಮತ್ತು ಠೇವಣಿಗಳ ಬಡ್ಡಿ ದರವನ್ನು ಹೆಚ್ಚಿಸುತ್ತವೆ. ಯಾಕೆಂದರೆ, ದೇಶದ ಬ್ಯಾಂಕ್‍ಗಳಿಗೆ ಆರ್.ಬಿ.ಐ ನೀಡುವ ಹಣಕಾಸಿಗೆ ಅಥವಾ ಸಾಲಕ್ಕೆ ವಿಧಿಸುವ ಬಡ್ಡಿ ದರವೇ ರೆಫೋ ದರವಾಗಿದೆ.

ಬುಧವಾರ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಆರ್.ಬಿ.ಐ ಪ್ರಕಟಿಸಲಿದೆ. ಒಂದು ವೇಳೆ ರೆಪೋ ದರ ಹೆಚ್ಚಳ ಪ್ರಕಟಿಸಿದಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಸಾಲ ಹಾಗೂ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಾಗಲಿದ್ದು, ಬ್ಯಾಂಕ್ ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.