ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ‘ಇನ್ವೆಸ್ಟ್ ಕರ್ನಾಟಕ 2022’ ನಾಳೆಯಿಂದ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನ.2 ರಿಂದ 4 ರವರೆಗೆ 3 ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಸಮಾವೇಶ ನಡೆಯಲಿದೆ.
ಕಾರ್ಯಕ್ರಮದಲ್ಲಿ 80 ಕ್ಕೂ ಹೆಚ್ಚು ಸಂವಾದ ಗೋಷ್ಠಿಗಳು ನಡೆಯಲಿವೆ. ಹೂಡಿಕೆದಾರರನ್ನು ಸೆಳೆಯುವ ಮತ್ತು ಮುಂದಿನ ದಶಕದಲ್ಲಿ ಮಾಡಬಹುದಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಿರ್ಧರಿಸಲು ಈ ಸಮಾವೇಶ ನಡೆಯುತ್ತಿದೆ.
ಇನ್ನು ಈ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ, 7 ಲಕ್ಷ ಕೋಟಿ ರೂ. ಹೂಡಿಕೆ ಹರಿದು ಬರುವ ಸಾಧ್ಯತೆ ಇದೆ. ಖಾಸಗಿ ವಲಯದಲ್ಲಿ 3 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು. ಕರ್ನಾಟಕ ರಾಜ್ಯ ಪ್ರಗತಿಯಲ್ಲಿ ದೇಶದ ನಂಬರ್ 1 ರಾಜ್ಯವಾಗುವ ಕಾಲ ಸನ್ನಿಹಿತವಾಗಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಬೆಂಗಳೂರೀನಾಚೆ ಹೂಡಿಕೆಗೆ ಬಹಳಷ್ಟು ಹೂಡಿಕೆದಾರರು ಆಸಕ್ತಿ ತೋರಿದ್ದು, ರಾಮನಗರ, ಹುಬ್ಬಳ್ಳಿ- ಧಾರವಾಡ, ಬಳ್ಳಾರಿ, ಕಲಬುರ್ಗಿ, ಮೈಸೂರು ಎಲ್ಲ ಕಡೆ ಬಂಡವಾಳ ಹೂಡಿ ಕೈಗಾರಿಕೆಗಳು ಬರುತ್ತಿವೆ. ಪ್ರಾದೇಶಿಕ ಅಡೆತಡೆಗಳನ್ನು ದಾಟಿ ಇಂದು ಕೈಗಾರಿಕೆಗಳು ಬರುತ್ತಿವೆ. ಇನ್ವೆಸ್ಟ್ ಕರ್ನಾಟಕ ಇಡೀ ಜಗತ್ತಿನ ಗಮನವನ್ನು ಸೆಳೆಯಲಿದೆ. ಜಗತ್ತಿನ ಹೂಡಿಕೆಯೂ ಇಲ್ಲಿಗೆ ಬರುತ್ತಿದೆ. ಕರ್ನಾಟಕದಲ್ಲಿ ಒಳ್ಳೆಯ ವಾತಾವರಣ ಇದೆ. ಮುಂದಿನ 5 ವರ್ಷಗಳ ಬೆಳವಣಿಗೆಗೆ ಒಂದು ಭದ್ರ ಬುನಾದಿಯನ್ನು ಹಾಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.