ಕೇದಾರನಾಥ ಶಿವಲಿಂಗದ ಮೇಲೆ ನೋಟುಗಳನ್ನು ತೂರಿದ ಮಹಿಳೆಯ ವಿರುದ್ಧ ಪ್ರಕರಣ ದಾಖಲು

ಕೇದಾರನಾಥ ದೇಸ್ಥಾನದ ಗರ್ಭಗುಡಿಯಲ್ಲಿರುವ ಶಿವಲಿಂಗದ ಮೇಲೆ ಮಹಿಳೆಯೊಬ್ಬಳು ನೋಟುಗಳನ್ನು ತೂರುತ್ತಿರುವ ದೃಶ್ಯ ಇದೀಗ ವೈರಲ್ ಆಗಿದೆ. ಬಿಳಿ ಸೀರೆ ಉಟ್ಟಿರುವ ಈಕೆ ಶಿವಲಿಂಗದ ಮೇಲೆ  ಆಕ್ಷೇಪಾರ್ಹ ರೀತಿಯಲ್ಲಿ ನೋಟುಗಳನ್ನು ಎಸೆಯುತ್ತಿರುವಾಗ ಉಳಿದವರು ಪ್ರಾರ್ಥನೆಯಲ್ಲಿ ತಲ್ಲೀನರಾಗಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಮಹಿಳೆಯ ವಿರುದ್ಧ ದೇವಸ್ಥಾನದ ಆಡಳಿತ ಮಂಡಳಿಯು ಸೋನ್​ಪ್ರಯಾಗ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದೆ. ತಕ್ಷಣವೇ ಪೂರಕ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದೆ.

ದೂರಿನನ್ವಯ ಪೊಲೀಸರು ಐಪಿಸಿ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಘಟನೆಯ ಬಗ್ಗೆ ತನಿಖೆ ಶುರು ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ಮಹಿಳೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಉತ್ತರಾಖಂಡ ಪೊಲೀಸರು ಕೂಡ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಈ ಮಹಿಳೆಯು ಧಾರ್ಮಿಕ ಭಾವನೆಗಳನ್ನು ಗಾಸಿಗೊಳಿಸಿದ್ದಕ್ಕಾಗಿ ಆಕೆಯ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ದೇವಾಲಯದೊಳಗೆ ಛಾಯಾಗ್ರಹಣವನ್ನು ನಿಷೇಧಿಸಲಾಗಿದೆ. ಆದರೂ ಈ ವಿಡಿಯೋ ಅನ್ನು ವ್ಯಕ್ತಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ. ಎಲ್ಲ ತಪ್ಪೂ ಪುರೋಹಿತರದ್ದೇ. ಅವರು ಹಣಕ್ಕಾಗಿ ಹಪಹಪಿಸುತ್ತಾರೆ. ಹಣಕ್ಕಾಗಿಯೇ ಇಂಥದಕ್ಕೆಲ್ಲ ಅನುಮತಿ ನೀಡುತ್ತಾರೆ, ಅವರಿಗೆ ನಾಚಿಕೆಯಾಗಬೇಕು. ಹಾಗೆಯೇ ಈಕೆಯನ್ನೂ ಬಂಧಿಸಬೇಕು ಎಂದು ಒಬ್ಬರು ಕಿಡಿಕಾರಿದ್ದಾರೆ.