ಕುಮಟಾ : ಯಾವ ವಿಷಯವೂ ಕಷ್ಟವಲ್ಲ, ಯಾವ ವಿಷಯವೂ ಸುಲಭವಲ್ಲ. ಸತತ ಪರಿಶ್ರಮ, ದೊಡ್ಡ ಗುರಿ, ಗುರುವಿನ ಸಾನಿಧ್ಯ, ಸ್ಪಷ್ಟ ನಿರೀಕ್ಷೆಗಳು ಎಲ್ಲಾ ಸಾಧನೆಗೂ ಕಾರಣವಾಗುತ್ತದೆ ಎಂದು ಪ್ರಖ್ಯಾತ ಗಣಿತ ಉಪನ್ಯಾಸಕ ಹಾಗೂ ವಾಗ್ಮಿ ಎಚ್.ಎನ್ ಪೈ ಹೇಳಿದರು. ವಿಧಾತ್ರಿ ಅಕಾಡೆಮಿಯ ಸಹಯೋಗದಲ್ಲಿ ನಡೆಯುತ್ತಿರುವ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಬಿ.ಕೆ ಭಂಡಾರ್ಕರ್ ಸರಸ್ವತಿ ಪಿ.ಯು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ನಡೆದ ‘ಪ್ರಾರಂಭಮ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅರ್ಜುನನಂತಹ ಶಿಷ್ಯ, ಕೃಷ್ಣನಂತಹ ಗುರುವಿದ್ದ ಕಾರಣಕ್ಕೆ ಯುದ್ಧರಂಗ ಶಿಕ್ಷಣ ರಂಗವಾಯಿತು. ಎಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ಬೋಧನೆಗಳು ನಡೆದವು. ಇದು ನಿಜವಾದ ಶಿಕ್ಷಣ ಕೃಷ್ಣನಂತಹ ಗುರು ಹಾಗೂ ಅರ್ಜುನನಂತಹ ಶಿಷ್ಯರು ವಿಧಾತ್ರಿ ಅಕಾಡೆಮಿಯಲ್ಲಿ ಸಿಗುತ್ತಾರೆ ಎಂಬುದು ನಮ್ಮ ಅನಿಸಿಕೆ ಎಂದ ಅವರು.
ಸಂಸ್ಥೆ ಹಂತ ಹಂತವಾಗಿ ಬೆಳೆದು ಬಂದಿದೆ. ಮೊದಲು 70 ವಿದ್ಯಾರ್ಥಿಗಳು, ನಂತರ 150, 170 ಈ ವರ್ಷ 214 ವಿದ್ಯಾರ್ಥಿಗಳು ಸಂಸ್ಥೆಯನ್ನು ನಂಬಿ ಬಂದಿದ್ದಾರೆ. ಆ ವಿದ್ಯಾರ್ಥಿಗಳಿಗೆ ಸೂಕ್ತ ಸಂಸ್ಕಾರ ಹಾಗೂ ಅಗತ್ಯ ಶಿಕ್ಷಣ ನೀಡುವ ಜವಾಬ್ದಾರಿ ಸಂಸ್ಥೆಯದ್ಷು ಎಂದು ಅವರು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ಕಾಲೇಜು ತಪ್ಪಿಸದಂತೆ ತರಗತಿಗೆ ಹಾಜರಾಗಬೇಕು, ಇದಕ್ಕೆ ಪಾಲಕರೂ ಪೂರಕರಾಗಿ ವರ್ತಿಸಬೇಕು. ಮಕ್ಕಳ ಓದಿಗೆ ಪಾಲಕರೂ ತಮ್ಮ ಕೆಲವು ಚಟುವಟಿಕೆಗಳನ್ನು ಬಿಟ್ಟು ತಪಸ್ಸು ಮಾಡುವುದು ಅಗತ್ಯ. ವ್ಯಕ್ತಿಯಿಂದ ವ್ಯಕ್ತಿಗೆ ಬೋಧಿಕ ಸೂಚ್ಯಾಂಕ ಬೇರೆ ಬೇರೆಯಾಗಿರುತ್ತದೆ, ಹಾಗಾಗಿ ಪಾಲಕರು ಇತರ ಮಕ್ಕಳ ಜೊತೆಗೆ ತಮ್ಮ ಮಕ್ಕಳನ್ನು ಹೋಲಿಸುವ ಅಥವಾ ಒತ್ತಾಯ ಮಾಡುವ ಕೆಲಸ ಮಾಡಬೇಡಿ. ಪ್ರೋತ್ಸಾಹ ನೀಡಿ ಮಕ್ಕಳನ್ನು ಬೆಳೆಸಿ ಎಂದು ಪಾಲಕರಿಗೆ ಕಿವಿಮಾತು ಹೇಳಿದರು.
ಇಂದಿನ ಪಾಠವನ್ನು ಇಂದೇ ಮುಗಿಸುವ ಮನಸ್ಸು ಮಾಡಬೇಕು. ಚಿಂತೆ ಮಾಡಬಾರದು, ಹೆದರಿಕೆ ಬಿಡಿ, ಹಿಂದಿನ ಘಟನೆಗಳ ಬಗ್ಗೆ ಚಿಂತನೆ ಬೇಡ. ವಿಧಾತ್ರಿ ಅಕಾಡೆಮಿಗೆ ಸೇರಿದ ನೀವು ಇಲ್ಲಿಂದ ಮುಂದೆ ಉಜ್ವಲ ಭವಿಷ್ಯ ಕಾಣುವಂತಾಗಲಿ, ನೀವು ಒಳ್ಳೆಯ ಮೌಲ್ಯಗಳನ್ನು ಬೆಳೆಸಿಕೊಳ್ಳಿ, ಹಣಕ್ಕಾಗಿ ಹಿಂದೆ ಬೀಳಬೇಡಿ, ಒಳ್ಳೆಯ ಗುಣದಿಂದಾಗಿ ಹಣ ಬರುವಂತಾಗುವಂತೆ ಬದುಕಿ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ಗುರುರಾಜ ಶೆಟ್ಟಿ ಮಾತನಾಡಿ ನಾಲ್ಕನೇ ವರ್ಷದ ಆರಂಭಮ್ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸವಾಗುತ್ತಿದೆ. ಈ ವಾರದಿಂದ ಪ್ರತಿದಿನ ಸಂಭ್ರಮವೇ ಆಗಿದೆ. ಪಿ.ಯು ರಿಸಲ್ಟ್, ಜೆಇಇ, ನೀಟ್ ಎಲ್ಲಾ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಮಾಧಾನ ನಮಗಿದೆ ಎಂದರು. ನಿಮ್ಮ ಮಕ್ಕಳಿಗೆ ಬೇಕಾದ ಎಲ್ಲಾ ಕಲಿಕೆಯನ್ನೂ ನಾವು ನೀಡುತ್ತೇವೆ. ಬೇರಾವುದೇ ಕೋಚಿಂಗ್ ಅವಶ್ಯಕತೆ ಅಗತ್ಯವಿಲ್ಲದಷ್ಟು ಸಮಗ್ರವಾಗಿ ನಾವು ವಿದ್ಯಾರ್ಥಿಗಳಿಗೆ ಸೌಲಭ್ಯ ಮಾಡುವುದಾಗಿ ಭರವಸೆ ನೀಡುತ್ತಾ ಉಪನ್ಯಾಸಕ ವೃಂದದವರನ್ನು ಪರಿಚಯಿಸಿದರು.
ಪ್ರಾಂಶುಪಾಲರಾದ ಕಿರಣ ಭಟ್ಟ ಕಾರ್ಯಸೂಚಿಯನ್ನು ವಿವರಿಸಿದರು. ಉಪಪ್ರಾಂಶುಪಾಲೆ ಸುಜಾತಾ ಹೆಗಡೆ ವೇದಿಕೆಯಲ್ಲಿದ್ದರು. ಉಪನ್ಯಾಸಕ ಪದ್ಮನಾಭ ಪ್ರಭು ಸ್ವಾಗತಿಸಿದರು. ಅಕ್ಷಯ ಹೆಗಡೆ ವಂದಿಸಿದರು. ಫರ್ಜಾನಾ ಶೇಖ್ ಹಾಗೂ ದೀಕ್ಷಿತಾ ಕುಮಟಾಕರ್, ಲತಾ ಮೇಸ್ತಾ ನಿರ್ವಹಿಸಿದರು. ಪಾಲಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.