ಕೆರೆಯಲ್ಲಿ ನೀರು ಕುಡಿಯಲು ಬಂದ ಹುಲಿಯನ್ನು ಅಟ್ಟಾಡಿಸಿಕೊಂಡು ಹೋದ ಗಜರಾಜ

ಹುಲಿಗಳು ಕಾಡಿನ ಅತ್ಯಂತ ಅಪಾಯಕಾರಿ ಪರಭಕ್ಷಕ ಪ್ರಾಣಿಗಳು. ಅವುಗಳು ಕಾಡಿನ ಇತರ ಪ್ರಾಣಿಗಳನ್ನು ತನ್ನ ಆಹಾರಕ್ಕಾಗಿ ಬೇಟೆಯಾಡುತ್ತವೆ. ಇಂತಹ ಧೈರ್ಯಶಾಲಿ ಪ್ರಾಣಿ ಆನೆಗಳೊಂದಿಗೆ ಸೆನೆಸಾಡಲು ಹೋಗುವುದಿಲ್ಲ. ಹುಲಿಗಳು ಗಜರಾಜನಿಗೆ ಭಯಪಟ್ಟು ಅವುಗಳಿಂದ ಆದಷ್ಟು ದೂರವಿರುತ್ತವೆ. ಹೀಗೆ ಹುಲಿ, ಸಿಂಹಗಳಂತಹ ಬಲಶಾಲಿ ಪ್ರಾಣಿಗಳು ಆನೆಗೆ ಭಯಪಡುವಂತಹ ಹಾಗೂ ಪ್ರಾಣಿ ಸಾಮ್ರಾಜ್ಯದ ಇನ್ನಿತರ ಕುತೂಹಲಕಾರಿ ವೀಡಿಯೋಗಳನ್ನು ಭಾರತೀಯ ಅರಣ್ಯ ಅಧಿಕಾರಿ ಸುಸಾಂತ ನಂದಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ಇದೇ ರೀತಿಯಲ್ಲಿ ಕೆರೆಯ ಬಳಿ ನೀರು ಕುಡಿಯಲು ಬಂದ ಹುಲಿಯನ್ನು ಗಜರಾಜ ಅಟ್ಟಾಡಿಸಿಕೊಂಡು ಹೋಗುವ ವೀಡಿಯೋವೊಂದನ್ನು ಅವರು ಹಂಚಿಕೊಂಡಿದ್ದಾರೆ.

ಭಾರತೀಯ ಅರಣ್ಯ ಅಧಿಕಾರಿ ಸುಸಾಂತ ನಂದ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಹುಲಿಗಳು ಮತ್ತು ಆನೆಗಳು ಕಾಡಿನಲ್ಲಿ ಪರಸ್ಪರ ಹೊಂದಿಕೊಂಡು ಜೀವಿಸುತ್ತವೆ. ಆದರೆ ಕೆಲವೊಮ್ಮೆ ದೈತ್ಯ ಆನೆ ರಾಜ ಯಾರೆಂಬುದನ್ನು ತೋರಿಸುತ್ತದೆ’ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಇಂತಹ ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿ ಮೊಬೈಲ್ ನಿಷೇಧಿಸಬೇಕೆ? ಎಂದು ಕೇಳಿದ್ದಾರೆ.

ಸಣ್ಣ ಕೆರೆಯೊಂದರ ಬಳಿ ಆನೆಯೊಂದು ನೀರು ಕುಡಿಯುತ್ತಾ ನಿಂತಿರುತ್ತದೆ. ಇತ್ತ ಕಡೆ ಕಾಡಿನಲ್ಲಿ ಬೇಟೆಯಾಡಿ ಸುಸ್ತಾಗಿ ಬಾಯಾರಿಕೆ ನೀಗಿಸಿಕೊಳ್ಳಲು ಹುಲಿ ಅದೇ ಕರೆಯ ಬಳಿಗೆ ಬರುತ್ತದೆ. ಆನೆಯನ್ನು ಕಂಡು ತುಸು ಮೆಲ್ಲನೆ ಹೆಜ್ಜೆಯನ್ನಿಡುತ್ತಾ ಹುಲಿರಾಯ ಬರುತ್ತೆ. ಆದರೆ ಹುಲಿ ಬರುವುದನ್ನು ಆನೆ ಮೊದಲೇ ಗಮನಿಸಿದೆ. ನಾನಿರುವ ಸ್ಥಳದಲ್ಲಿ ನೀನು ನೀರು ಕುಡಿಯುತ್ತೀಯಾ ಎಂದು ಕೋಪಗೊಂಡ ಗಜರಾಜ ಹುಲಿಯನ್ನು ಓಡಿಸಿಕೊಂಡು ಹೋಗುವ ದೃಶ್ಯಾವಳಿಯನ್ನು ಕಾಣಬಹುದು.