ಬಹುಕೋಟಿ ರೂಪಾಯಿ ಬಜೆಟ್ ಹಾಕಿ ಮಾಡಿದ ‘ಆದಿಪುರುಷ್’ ಸಿನಿಮಾಗೆ ಕೆಟ್ಟ ವಿಮರ್ಶೆ ವ್ಯಕ್ತವಾಗುತ್ತಿದೆ. ಈ ಸಿನಿಮಾದ ಹಲವು ಅಂಶಗಳನ್ನು ಟೀಕಿಸಲಾಗುತ್ತಿದೆ. ರಾಮಾಯಣವನ್ನು ಆಧರಿಸಿದ ಈ ಸಿನಿಮಾದಲ್ಲಿ Prabhas ಅವರು ರಾಮನ ಪಾತ್ರ ಮಾಡಿದ್ದಾರೆ. ಸೀತೆಯಾಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ. ಆಂಜನೇಯನಾಗಿ ದೇವದತ್ತ ನಾಗೆ ಅವರು ಅಭಿನಯಿಸಿದ್ದಾರೆ. ಲಕ್ಷ್ಮಣನ ಪಾತ್ರಕ್ಕೆ ಸನ್ನಿ ಸಿಂಗ್ ಅವರು ಬಣ್ಣ ಹಚ್ಚಿದ್ದಾರೆ. ಸೈಫ್ ಅಲಿ ಖಾನ್ ಅವರು ರಾವಣನಾಗಿ ಅಬ್ಬರಿಸಿದ್ದಾರೆ. ಆದರೆ ರಾಮಾಯಣವನ್ನು ತೋರಿಸಿದ ರೀತಿ ಸರಿಯಾಗಿಲ್ಲ ಎಂದು ಪ್ರೇಕ್ಷಕರು ತಕರಾರು ತೆಗೆದಿದ್ದಾರೆ. ಈ ಸಂದರ್ಭದಲ್ಲಿ ಸಿನಿಮಾದ ಸಂಭಾಷಣಕಾರ ಮನೋಜ್ ಮುಂತಶೀರ್ ಅವರು ಮಾತು ಬದಲಾಯಿಸಿದ್ದಾರೆ. ಈ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ‘ಆದಿಪುರುಷ್’ ಸಿನಿಮಾವನ್ನು ಟ್ರೋಲ್ ಮಾಡಲಾಗುತ್ತಿದೆ. ಪಾತ್ರಗಳನ್ನು ತೋರಿಸಿದ ರೀತಿ, ಸಂಭಾಷಣೆಯ ಶೈಲಿ, ಗ್ರಾಫಿಕ್ಸ್ ಗುಣಮಟ್ಟ ಸೇರಿದಂತೆ ಅನೇಕ ವಿಚಾರಗಳನ್ನು ಜನರು ಟೀಕಿಸುತ್ತಿದ್ದಾರೆ. ಈ ನಡುವೆ ಸಂಭಾಷಣಕಾರ ಮನೋಜ್ ಮುಂತಶೀರ್ ಅವರು ನೀಡಿದ ಕೇಳಿಕೆ ಸೆನ್ಸೇಷನ್ ಸೃಷ್ಟಿ ಮಾಡಿದೆ. ‘ಇದನ್ನು ನಾನು ಮೊದಲೇ ಹೇಳಿದ್ದೇ ಮತ್ತು ಈಗಲೂ ಹೇಳುತ್ತೇನೆ. ಈ ಸಿನಿಮಾದ ಹೆಸರು ಆದಿಪುರುಷ್. ನಾವು ರಾಮಾಯಣವನ್ನು ಸಿನಿಮಾ ಮಾಡಿಲ್ಲ. ಅದರಿಂದ ತುಂಬ ಸ್ಫೂರ್ತಿ ಪಡೆದಿದ್ದೇವೆ. ಡಿಸ್ಕ್ಲೈಮರ್ನಲ್ಲೂ ನಾವು ಅದನ್ನೇ ಹೇಳಿದ್ದೇವೆ’ ಎಂದು ಮನೋಜ್ ಮುಂತಶೀರ್ ಹೇಳಿರುವುದಾಗಿ ವರದಿ ಆಗಿದೆ.
‘ಆದಿಪುರುಷ್’ ಸಿನಿಮಾ ಬಗ್ಗೆ ಜನರು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಸಿನಿಮಾ ನೋಡಿದ ಬಳಿಕ ಬಹುತೇಕರಿಗೆ ನಿರಾಸೆ ಆಗಿದೆ. ‘ರಾಮನ ಹೆಸರನ್ನು ಹಾಳು ಮಾಡಬೇಡಿ’ ಎಂದು ಕಂಗನಾ ರಣಾವತ್ ಅವರು ಪರೋಕ್ಷವಾಗಿ ಚಿತ್ರತಂಡಕ್ಕೆ ತಿವಿದಿದ್ದಾರೆ. ಈ ಚಿತ್ರದಿಂದ ಹಿಂದೂಗಳ ಭಾವನೆಗೆ ಧಕ್ಕೆ ಆಗಿದೆ ಎಂದು ಕೂಡ ಕೆಲವರು ಆರೋಪಿಸುತ್ತಿದ್ದಾರೆ. ಹಾಗಿದ್ದರೂ ಕೂಡ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ತಗ್ಗಿಲ್ಲ. ಮೊದಲ ದಿನ ಈ ಸಿನಿಮಾ ವಿಶ್ವಾದ್ಯಂತ ನೂರಾರು ಕೋಟಿ ರೂಪಾಯಿ ಕಮಾಯಿ ಮಾಡಿದೆ.
ಪ್ರಭಾಸ್ ಅವರು ‘ಆದಿಪುರುಷ್’ ಸಿನಿಮಾದಿಂದ ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದರು. ಆದರೆ ನಿರೀಕ್ಷಿಸಿದ ರೀತಿಯಲ್ಲಿ ಜನರಿಂದ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂಬುದು ಬೇಸರದ ವಿಚಾರ. ವಿಮರ್ಶಕರು ಕೂಡ ಈ ಚಿತ್ರವನ್ನು ತೆಗಳಿದ್ದಾರೆ. ಸದ್ಯಕ್ಕೆ ಪ್ರಭಾಸ್ ಅವರು ಮೌನಕ್ಕೆ ಶರಣಾಗಿದ್ದಾರೆ. ಯಾವುದೇ ರೀತಿಯ ಟೀಕೆಗಳಿಗೂ ಅವರು ಉತ್ತರಿಸುವ ಗೋಜಿಗೆ ಕೈ ಹಾಕಿಲ್ಲ. ಮುಂದಿನ ದಿನಗಳಲ್ಲಿ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದುನೋಡಬೇಕು.