ಭಾನುವಾರವೂ ಮುಂದುವರಿದ ನಾರಿ ‘ಶಕ್ತಿ’ ಪ್ರದರ್ಶನ, ಭಕ್ತಿಯಿಂದ ದೇಗುಲಗಳ ದರ್ಶನ

ಬೆಂಗಳೂರು(ಜೂ.18): ಮಹಿಳೆಯರ ಉಚಿತ ಬಸ್‌ ಪ್ರಯಾಣದ ಶಕ್ತಿ ಯೋಜನೆ ಜಾರಿಗೊಂಡ ನಂತರದ ಮೊದಲ ವೀಕೆಂಡ್‌ ಹಿನ್ನೆಲೆಯಲ್ಲಿ ಶನಿವಾರ ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಮಹಿಳೆಯರ ಸಂಖ್ಯೆಯಲ್ಲಿ ಶೇ.45ರಿಂದ 50ರಷ್ಟು ಹೆಚ್ಚಳವಾಗಿದೆ. ಹಾಗಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕಾಲಿಡಲು ಸಹ ಸಾಧ್ಯವಾಗದಷ್ಟು ದಟ್ಟಣೆ ಕಂಡು ಬಂದಿತ್ತು.

ರಾಜ್ಯದ ಬಹುತೇಕ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳಿಗೆ ಹೊರಡುವ ಬಸ್‌ಗಳಲ್ಲಿ ಆಸನಗಳು ಭರ್ತಿಯಾಗಿದ್ದವು. ಹೀಗಾಗಿ ಅನೇಕ ಮಹಿಳೆಯರು ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಮತ್ತೊಂದು ಬಸ್‌ಗೆ ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಧರ್ಮಸ್ಥಳ, ಸಿಗಂಧೂರು, ಕುಕ್ಕೆಸುಬ್ರಹ್ಮಣ್ಯ, ಮುರುಡೇಶ್ವರ, ಶೃಂಗೇರಿ, ಹೊರನಾಡು ಕ್ಷೇತ್ರಗಳಿಗೆ ಹೋಗುವ ಮಹಿಳೆಯರ ಸಂಖ್ಯೆ ಹೆಚ್ಚಾಗಿತ್ತು. ಭಾನುವಾರವೂ ರಜಾ ದಿನ ಆಗಿರುವ ಹಿನ್ನೆಲೆಯಲ್ಲಿ ಮಹಿಳೆಯರೊಂದಿಗೆ ವಿದ್ಯಾರ್ಥಿನಿಯರು, ಮಕ್ಕಳು ಇದ್ದರು.

ಸಾರಿಗೆ ಸಂಸ್ಥೆಯ ಮೂರು ನಿಗಮಗಳ 34 ವಿಭಾಗಗಳ 188 ಘಟಕಗಳಿಂದಲೂ ರಾಜ್ಯದ ವಿವಿಧ ಧಾರ್ಮಿಕ ಸ್ಥಳಗಳಿಗೆ ಬಸ್‌ ಸೌಲಭ್ಯ ಇದೆ. ಚಿಕ್ಕಮಗಳೂರು ಘಟಕದ ಐದಾರು ಬಸ್‌ಗಳು ಬೆಂಗಳೂರಿನಿಂದ ಶೃಂಗೇರಿ, ಹೊರನಾಡಿಗೆ ನೇರವಾಗಿ ಕಾರ್ಯಾಚರಣೆ ಮಾಡುತ್ತವೆ. ಕಡೂರು ಘಟಕದಿಂದ ಧರ್ಮಸ್ಥಳ, ಹಾಸನ ಘಟಕದಿಂದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಬಸ್‌ಗಳು ಸಂಚರಿಸುತ್ತವೆ. ಬೆಂಗಳೂರಿನಿಂದ ಮುರುಡೇಶ್ವರ, ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಸಾಗರ, ಬಾದಾಮಿ, ಮಲೆಮಹದೇಶ್ವರ, ಮೈಸೂರು, ನಂಜನಗೂರು, ಚಿಕ್ಕಬಳ್ಳಾಪುರ, ವಿಜಯಪುರ ಹೀಗೆ ಅನೇಕ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ಬಸ್‌ಗಳಿದ್ದು, ಬಹುತೇಕ ಬಸ್‌ಗಳು ಶುಕ್ರವಾರದಿಂದಲೇ ಭರ್ತಿಯಾಗುತ್ತಿದ್ದವು. ಶನಿವಾರವೂ ಮುಂಜಾನೆಯಿಂದಲೇ ಮಹಿಳಾ ಪ್ರಯಾಣಿಕರಿಂದ ಬಸ್‌ಗಳು ತುಂಬಿಕೊಂಡಿದ್ದವು.

ಮೈಸೂರು ರಸ್ತೆಯ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣದಿಂದ ಮೈಸೂರು ಕಡೆಗೆ ಹೋಗುವ ಬಸ್‌ಗಳು ಶನಿವಾರ ಮುಂಜಾನೆಯಿಂದಲೇ ಭರ್ತಿಯಾಗಿದ್ದವು. ಹೀಗಾಗಿ ಮಹಿಳೆಯರು, ಯುವತಿಯರ ಸಂಖ್ಯೆ ಬಸ್‌ ನಿಲ್ದಾಣದಲ್ಲಿ ಹೆಚ್ಚಾಗಿದ್ದರಿಂದ ಹೆಚ್ಚುವರಿ ಬಸ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಮೈಸೂರಿಗೆ 15 ಮತ್ತು ಮಲೆಮಹದೇಶ್ವರ ಬೆಟ್ಟಕ್ಕೆ 9 ಮತ್ತು ಧರ್ಮಸ್ಥಳಕ್ಕೆ 15ಕ್ಕೂ ಹೆಚ್ಚು ಬಸ್‌ಗಳು ಕಾರ್ಯಾಚರಣೆ ನಡೆಸಿದವು ಎಂದು ಸಾರಿಗೆ ಸಂಸ್ಥೆ ಮೂಲಗಳು ತಿಳಿಸಿವೆ.
ಇನ್ನು ಇಂದು ಭಾನುವಾರವೂ ರಾಜ್ಯದ ದೇವಸ್ಥಾನಗಳಿಗೆ ತೆರಳಲು ಮಹಿಳೆ ತೆರಳುತ್ತಿದ್ದಾರೆ. ಇಂದು ಆಷಾಢ ಅಮವಾಸ್ಯೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ನಿಮಿಷಾಂಭ ದೇವಸ್ಥಾನ ಮಹಿಳಾ ಭಕ್ತರ ದಂಡೇ ಹರಿದುಬರುತ್ತಿದೆ. ಸಾವಿರಾರು ಮಂದಿ ಭಕ್ತರು ಸರದಿ ಸಾಲಲ್ಲಿ ನಿಂತಿದ್ದಾರೆ. ಆಷಾಢದ ಮೊದಲ ದಿನ ನಿಮಿಷಾಂಭ ದೇವಿ ನೋಡಿದ್ರೆ ಒಳಿತಾಗುತ್ತದೆ ಎಂಬ ಪ್ರತೀತಿ ಇದೆ. ಈ ಹಿನ್ನೆಲೆ ಬೆಳಗ್ಗೆಯಿಂದ ಸರದಿ ಸಾಲಲ್ಲಿ ಭಕ್ತರು  ನಿಂತಿದ್ದಾರೆ.  ಮಂಡ್ಯ, ಮೈಸೂರು, ಹಾಸನ ಬೆಂಗಳೂರು, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದಾರೆ. 

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಬಸ್ ನಿಲ್ದಾಣ ಮಹಿಳೆಯರಿಂದಲೇ ತುಂಬಿ ತುಳುಕುತ್ತಿದೆ. ಮಾದಪ್ಪನ ದರ್ಶನ ಪಡೆಯಲು ಮಹಿಳಾ ಭಕ್ತರು ಆಗಮಿಸುತ್ತಿದ್ದಾರೆ. ಬಸ್ ಬಂದ ಎರಡೇ ನಿಮಿಷಕ್ಕೆ ಪುಲ್ ರಶ್ ಆಗುತ್ತಿವೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತ ವೃಂದ ಬೆಟ್ಟದತ್ತ ಮುಖ ಮಾಡುತ್ತಿದ್ದಾರೆ. ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರಿನಿಂದ ಭಕ್ತರು ಆಗಮಿಸಿದ್ದಾರೆ. ಈಗಾಗ್ಲೇ ಸಾರಿಗೆ ನಿಗಮದಿಂದ ಹೆಚ್ಚುವರಿಯಾಗಿ 90 ಬಸ್‌ಗಳನ್ನ ಬಿಡಲಾಗಿದೆ. ಆದ್ರೂ ಬೆಟ್ಟಕ್ಕೆ ಹೋಗುವ ಭಕ್ತರ ಸಂಖ್ಯೆ ಹೆಚ್ಚಾಗಿದೆ.