ಅಂಕೋಲಾ: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ಆಡಳಿತ, ಶಿಕ್ಷಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ನಡೆಯಿತು.
ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶರಾದ ಪ್ರಶಾಂತ ಬಾದವಾಡಗಿ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆಯ ಪರಿಸ್ಥಿತಿ, ಪರಿಸರ ಒತ್ತಡಕ್ಕೆ ಮಣಿದು, ಇತರರ ಪ್ರಭಾವ ಮತ್ತು ಮೋಜು ಮಸ್ತಿಯ ವ್ಯಾಮೋಹ ಇತ್ಯಾದಿ ಕಾರಣಗಳಿಂದ ಬಾಲ ಕಾರ್ಮಿಕರ ಪದ್ಧತಿಗೆ ಅನಿವಾರ್ಯವಾಗಿ ತಳ್ಳಲ್ಪಡುತ್ತಾರೆ. ಹಾಗಾಗಿ ಬಾಲ ಕಾರ್ಮಿಕ ಪದ್ಧತಿ ವಿರುದ್ದ ಜಾಗೃತಿ ಮೂಡಿಸುವ ಪ್ರಯತ್ನವಾಗಿ ಈ ರೀತಿಯ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಭಾರತದ ಭವಿಷ್ಯವನ್ನು ಉಜ್ವಲಗೊಳಿಸುವ ಸಲುವಾಗಿ
ಸರ್ಕಾರ ಉಚಿತ ಶಿಕ್ಷಣ ನೀಡುತ್ತಿದೆ. ಶಿಕ್ಷಣ ಪಡೆಯದವರು ಹೆಚ್ಚಾಗಿ ವಿವಿಧ ಪ್ರಕರಣಗಳಲ್ಲಿ ಸಿಲುಕಿ ಹಾಕಿಕೊಂಡಿರುವುದು ಕಂಡು ಬರುತ್ತಿದೆ. ಶಿಕ್ಷಣದ ಜೊತೆಗೆ ಕಾನೂನು ಸೇವೆಗಳ ಕುರಿತು ಅರಿಯಿರಿ. ಮೊಬೈಲ್ ಬಳಕೆ ಆರೋಗ್ಯಕರವಾಗಿರಲಿ. ಅತಿಯಾದಲ್ಲಿ ಅದು ಅಪರಾಧ ಪ್ರಕರಣಗಳಲ್ಲಿ ನಿಮ್ಮನ್ನು ಒಳಪಡುವಂತೆ ಮಾಡುತ್ತದೆ ಎಂದರು
ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ್ ಮಾತನಾಡಿ, ನಿಮ್ಮ ಸುತ್ತ ಮುತ್ತಲಿನ ಯಾವುದೇ ಮಕ್ಕಳು ಬಾಲಕಾರ್ಮಿಕ ಪದ್ಧತಿಗೆ ಬಲಿಯಾಗದೇ ನಿಮ್ಮಂತೆ ಬದುಕುವಂತೆ ಮಾಡೋಣ. ಬಾಲಕಾರ್ಮಿಕರು ಕಂಡು ಬಂದಲ್ಲಿ ಇಲಾಖೆಗೆ ತಿಳಿಸಿ ಎಂದರು.
ಹಿರಿಯ ವಕೀಲ ವಾಸುದೇವ ನಾಯಕ ಉಪನ್ಯಾಸ ನೀಡಿ, ಕಾರ್ಮಿಕ ಶೋಷಣೆಯ ವಿರುದ್ಧ ಕಾರ್ಮಿಕ ಕಾನೂನುಗಳು ಜಾರಿಯಾಗಿದೆ. ಬಾಲಕರು ದೇಶದ ಸಂಪತ್ತು. ಬಡತನದ ಕಾರಣಕ್ಕೆ ಒತ್ತಾಯದ ದುಡಿಮೆಗೆ ಮಕ್ಕಳನ್ನು ಕಳುಹಿಸಬಾರದು ಎಂದು ಸಂವಿಧಾನದಲ್ಲಿ ತಿಳಿಸಿದೆ. ಬಾಲಕಾರ್ಮಿಕತನಕ್ಕೆ ಕಾನೂನುಗಳ ಮೂಲಕ ಕಠಿಣ ನಿರ್ಭಂದ ಹೇರಲಾಗಿದೆ. ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಿ ಎಲ್ಲರಿಗೂ ಕಡ್ಡಾಯ ಶಿಕ್ಷಣ ನೀಡಿದರೆ ಬಾಲಕಾರ್ಮಿಕ ಪದ್ಧತಿಯನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದರು.
ತಹಶೀಲ್ದಾರ್ ಪ್ರವೀಣ್ ಹುಚಣ್ಣವರ ಅಧ್ಯಕ್ಷತೆ ವಹಿಸಿ, ಬಾಲ ಕಾರ್ಮಿಕ ಪದ್ಧತಿ ದೇಶಕ್ಕೆ ಶಾಪ ಆಗಬಾರದು. ವಿದ್ಯಾರ್ಥಿಗಳು ಬಾಲ ಕಾರ್ಮಿಕರನ್ನು ಕಂಡರೆ ಸರ್ಕಾರದ ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ನೀಡಿ. ಜೊತೆಯಲ್ಲಿ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದರು.
ತಾಪಂ ಕಾರ್ಯ ನಿರ್ವಹಣಾಧಿಕಾರಿ ಪಿ. ವಾಯ್ ಸಾವಂತ,
ಸಹಾಯಕ ಸರಕಾರಿ ಅಭಿಯೋಜಕ ಗೀರಿಶ ಪಟಗಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸವಿತಾ ಶಾಸ್ತ್ರಿಮಠ, ವಕೀಲರ ಸಂಘದ ಅಧ್ಯಕ್ಷ ಬಿಟಿ ನಾಯಕ, ಪ್ರೌಢಶಾಲೆಯ ಮುಖ್ಯಾಧ್ಯಾಪಕ ಭಾಸ್ಕರ್ ಗಾಂವಕರ ಇದ್ದರು.
ಹಿರಿಯ ವಕೀಲ ಉಮೇಶ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ಕಳೆದ ವರ್ಷ ಬೀದಿ ಬದಿಯಲ್ಲಿ ಅಪಾಯಕಾರಿ ಕೆಲಸದಲ್ಲಿ ತೊಡಗಿದ್ದ ಮಕ್ಕಳನ್ನು ಗಮನಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳ ಲಕ್ಷ್ಮೀ ಪಾಟೀಲ್ ಅಧಿಕಾರ ವಹಿಸಿಕೊಂಡ ದಿನದಿಂದಲೇ ಕಾರ್ಯಪ್ರವತ್ತರಾಗಿ ಮಕ್ಕಳನ್ನು ರಕ್ಷಿಸಿ ಶಾಲೆಯಲ್ಲಿ ಪ್ರವೇಶ ಕಲ್ಪಿಸಿ, ಎಲ್ಲಾ ಅಗತ್ಯ ಸೌಲಭ್ಯ ಒದಗಿಸಿದ್ದರು ಎಂದು ಅವರು ಶ್ಲಾಘನೆ ವ್ಯಕ್ತಪಡಿಸಿದರು.
ಕಾರ್ಮಿಕ ನೀರಿಕ್ಷಕ ತೀರ್ಥಬಾಬು ಸ್ವಾಗತಿಸಿದರು.
ಶಿಕ್ಷಕ ಮಂಜುನಾಥ ನಾಯ್ಕ ವಂದನಾರ್ಪಣೆ ಸಲ್ಲಿಸಿದರು. ಪ್ರೌಢಶಾಲಾ ವಿದ್ಯಾರ್ಥಿಗಳು ಶಿಕ್ಷಕರು ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.