ವಿಜಯಪುರ (ಜೂನ್ 17): ಶಿಕ್ಷಣ ಅನ್ನೋದು ಹಾಗೇ ಎಷ್ಟು ಕಲಿತಲು ಮುಗಿಯದ ಸಮುದ್ರವಿದ್ದಂತೆ. ಬಹುತೇಕ ನೌಕರಿಗೆ ಆಗುವಷ್ಟು, ತಮ್ಮ ಉದ್ಯೋಗಕ್ಕೆ ಆಗುವಷ್ಟು ಕಲಿತು ತಮ್ಮತಮ್ಮ ವೃತ್ತಿಗಳಲ್ಲಿ ತೊಡಗಿಕೊಂಡು ಬಿಡ್ತಾರೆ. ಇನ್ನು ಕೆಲವರಿಗೆ ಕಲಿಕೆ ಎನ್ನುವುದು ಎಂದು ಮುಗಿಯದ ಆಸಕ್ತಿ. ವಿಜಯಪುರದಲ್ಲು ಸಹ ಎಂ.ಎ ಇಂಗ್ಲಿಷ್ ಪರೀಕ್ಷೆ ನಡೆಯುತ್ತಿದ್ದ ಪರೀಕ್ಷಾ ಕೇಂದ್ರದಲ್ಲಿ ಓರ್ವ ಪರೀಕ್ಷಾರ್ಥಿ ಗಮನ ಸೆಳೆದಿದ್ದಾರೆ. ವೃದ್ಧಾಪ್ಯದಲ್ಲು ಕಲಿಕೆ ಮುಂದುವರೆಸಿರುವ ಇವರು ಇತರೆ ಪರೀಕ್ಷಾರ್ಥಿಗಳನ್ನ ನಾಚಿಸುವಂತೆ ಪರೀಕ್ಷೆಯಲ್ಲಿ ಹಾಜರಾದರು..
ದೇಹಕ್ಕೆ ವಯಸ್ಸು, ಕಲಿಕೆಯ ಆಸಕ್ತಿಗಲ್ಲ..!
ಕಲಿಕೆಗೆ ವಯಸ್ಸು ಎಂಬುದಿಲ್ಲ. ದೇಹಕ್ಕೆ ವಯಸ್ಸಾಗಬಹುದೇ ಹೊರತು ಕಲಿಕಾಸಕ್ತಿಗೆ ಇಲ್ಲ ಎಂಬುದನ್ನು 81 ವರ್ಷದ ವೃದ್ಧ ತೋರಿಸಿ ಕೊಟ್ಟಿದ್ದಾರೆ. ನಗರದ ಪ್ರತಿಷ್ಠಿತ ಬಿ. ಎಲ್. ಡಿ. ಇ ಸಂಸ್ಥೆಯ ಕಾಲೇಜಿನಲ್ಲಿ ನಡೆಯುತ್ತಿರುವ ಇಗ್ನೋ (ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ) ಪರೀಕ್ಷೆಯಲ್ಲಿ “ಎಂ. ಎ. ಇಂಗ್ಲಿಷ್” ಅಂತಿಮ ವರ್ಷದ ಪರೀಕ್ಷೆ ಬರೆಯುವ ಮೂಲಕ ನಿಂಗಯ್ಯ ಒಡೆಯರ ಗಮನ ಸೆಳೆದಿದ್ದಾರೆ.
ಇದು ಐದನೇ ಸ್ನಾತಕೋತ್ತರ ಪರೀಕ್ಷೆ..!
ಅದೆಷ್ಟೋ ಜನರ ಶಿಕ್ಷಣ ಶುರುವಾಗಿ ಕಾಲೇಜು ಹಂತಕ್ಕೆ ಮೊಟಕುಗೊಳ್ಳುವುದನ್ನ ನೋಡಿದ್ದೇವೆ. ಕಲಿಕೆಯ ನಿರಾಸಕ್ತಿ, ಆರ್ಥಿಕ ಹಿಂಜರಿತ, ಕುಟುಂಬದ ಹೊರೆಯಿಂದಾಗಿ ಅದೇಷ್ಟೋ ವಿದ್ಯಾರ್ಥಿಗಳು ಶಿಕ್ಷಣವನ್ನ ಮೊಟಕುಗೊಳಿಸ್ತಾರೆ. ಇನ್ನು ಅದೇಷ್ಟೊ ಹುಡುಗರು ಓದುವ, ಕಲಿಕೆಯ ನಿರಾಸಕ್ತಿಯಿಂದಲು ಕಾಲೇಜು ಮಟ್ಟಿಲನ್ನೆ ಏರೋದಿಲ್ಲ. ಆದ್ರೆ ನಿಂಗಯ್ಯ ಒಡೆಯರ ಅವರ ಕಲಿಕೆಯ ಆಸಕ್ತಿ ಯಾವ ಮಟ್ಟಿಗೆ ಇದೆ ಎಂದರೆ, ಅವರ 5ನೇ ಸ್ನಾತಕೋತ್ತರ ಪರೀಕ್ಷೆ ಇದಾಗಿದೆ. ಅವರಲ್ಲಿ ಓದಿನ ಬಗ್ಗೆ ಇರುವ ಹಂಬಲ ಮತ್ತು ಇಚ್ಛಾಶಕ್ತಿ, ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸುವವರಿಗೆ ಮಾದರಿಯಾಗಿದೆ.
ಬಾಗಲಕೋಟೆ ಜಿ. ಇಳಕಲ್ ಮೂಲದವರು ನಿಂಗಯ್ಯ..!
ಬಾಗಲಕೋಟೆ ಜಿಲ್ಲೆಯ ಇಳಕಲ ತಾಲೂಕಿನ ಗುಡೂರು ಬಳಿಯ ಎಸ್. ಸಿ. ಹಳ್ಳಿಯವರಾಗಿರುವ ನಿಂಗಯ್ಯ ಒಡೆಯರ ಅವರಿಗೆ ಇಬ್ಬರು ಗಂಡು ಮತ್ತು ಓರ್ವ ಹೆಣ್ಣು ಮಕ್ಕಳು ಹಾಗೂ ಐದು ಜನ ಮೊಮ್ಮಕ್ಕಳಿದ್ದಾರೆ. ಆದರೆ, ಇವರ ಕಲಿಕೆಗೆ ಯಾವುದೂ ಅಡ್ಡಿಯಾಗಿಲ್ಲ. ಇವರ ಮಗಳು ಕೂಡ ಪಿ. ಎಚ್. ಡಿ. ಪದವಿ ಪಡದಿದ್ದಾರೆ. ಇವರ ಗಂಡು ಮಕ್ಕಳು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಇವರು ನಿವೃತ್ತ ಸರ್ಕಾರಿ ನೌಕರರು ಹೌದು..!
ಸರಕಾರಿ ನೌಕರಿಯಲ್ಲಿದ್ದ ಇವರು ಸೇವಾ ನಿವೃತ್ತಿಯ ನಂತರ ಮತ್ತಷ್ಟು ಕಲಿಯಬೇಕು ಎಂಬ ಹಂಬಲದಿಂದ ಈಗಾಗಲೇ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೇ, ಇಗ್ನೋದಿಂದ ಸಮಾಜಶಾಸ್ತ್ರ ಸ್ನಾತಕೋತ್ತರ ಪದವಿಯನ್ನೂ ಇವರು ಪಡೆದಿದ್ದಾರೆ. ಆದರೂ ಇವರಿಗೆ ಇನ್ನೂ ಓದುವ ಮತ್ತು ಪರೀಕ್ಷೆ ಬರೆಯುವ ಹವ್ಯಾಸ ಮಾತ್ರ ಕಡಿಮೆಯಾಗದಿರುವುದು ಗಮನಾರ್ಹವಾಗಿದೆ.
ಇವರು ಸಾಧನೆಯ ಹಿಂದೆಯು ಇದ್ದಾರೆ ಮಹಿಳೆ..!
ತಮ್ಮ ಈ ಸಾಧನೆಗೆ ತಮ್ಮ ಧರ್ಮ ಪತ್ನಿ ಎಂದು ಸಂತಸದಿಂದ ಹೇಳುವ ನಿಂಗಯ್ಯ ಒಡೆಯರ, 81ರ ಇಳಿ ವಯಸ್ಸಿನಲ್ಲಿಯೂ ಯೋಗಪಟುವಾಗಿದ್ದಾರೆ. ವಿಶಿಷ್ಠವಾದ ಸಾಹಸಗಳನ್ನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಪರೀಕ್ಷಾ ಕೇಂದ್ರದಲ್ಲಿಯೇ ಸ್ಪೂರ್ತಿಯ ಸೆಲೆ..!
ಇದೀಗ ಇವರು ಈಗ ನಡೆಯುತ್ತಿರುವ ಸ್ನಾತಕೋತ್ತರ ಪರೀಕ್ಷೆಯಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದು, ಪರೀಕ್ಷೆಗೆ ಹಾಜರಾಗುತ್ತಿರುವ ಇತರ ಅಭ್ಯರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಇಗ್ನೋ ಅಧ್ಯಯನ ಕೇಂದ್ರದ ಸಂಯೋಜಕ ಡಾ. ನಿಂಗನಗೌಡ ಪಾಟೀಲ ಹೇಳಿದ್ದಾರೆ. ನಿಂಗಯ್ಯ ಒಡೆಯರ ಅವರ ಈ ಹುಮ್ಮಸ್ಸಿನ ಬಗ್ಗೆ ಇಗ್ನೋ ಪ್ರಾಂತ ನಿರ್ದೇಶಕ ಡಾ. ಎ. ವರದರಾಜನ, ಸಹಾಯಕ ನಿರ್ದೇಶಕ ಡಾ. ಬಿ. ಎನ್. ದೇವೇಂದ್ರ, ಬಿ. ಎಲ್. ಡಿ. ಇ ನಸಿರ್ಂಗ್ ಕಾಲೇಜಿನ ಪ್ರಾಚಾರ್ಯ ಡಾ. ಶಾಲ್ಮೊನ್ ಚೋಪಡೆ, ಇಗ್ನೋ ಸಹ ಸಂಯೋಜಕ ಡಾ. ಸತೀಶ ನಡಗಡ್ಡಿ ಸಂತಸ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.